ಶೋಭಾ ಕರಂದ್ಲಾಜೆ ಕಚೇರಿಗೆ ಕಾಂಗ್ರೆಸ್ ಐ.ಟಿ. ಸೆಲ್ ಮುತ್ತಿಗೆ

Update: 2018-01-19 11:14 GMT

ಚಿಕ್ಕಮಗಳೂರು, ಜ.19: ಸಂಸದೆ ಶೋಭಾ ಕರಂದ್ಲಾಜೆ ನಾಪತ್ತೆ ಆಗಿದ್ದಾರೆ ಎಂದು ಆರೋಪಿಸಿ ಕಳೆದು ಹೋಗಿರುವ ಲೋಕಸಭಾ ಸದಸ್ಯರನ್ನು ಹುಡುಕಿಕೊಡಿ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಜಿಲ್ಲಾಧ್ಯಕ್ಷ ಕಾರ್ತಿಕ್ ಜಿ.ಚೆಟ್ಟಿಯಾರ್ ನೇತೃತ್ವದಲ್ಲಿ ಸಂಸದರ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ಮುತ್ತಿಗೆ ಹಾಕಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ, ಜಿಲ್ಲೆಯ ರೈತರು, ಕಾಫಿ ಬೆಳೆಗಾರರು ಕಂಗಾಲಾಗಿದ್ದು, ಜಿಲ್ಲೆಯಲ್ಲಿನ ಕಾಫಿ, ಮೆಣಸಿನ  ಬೆಳೆಗಾರರ ಬಗ್ಗೆ ಲೋಕಸಭೆಯಲ್ಲಿ ಸದಸ್ಯರು ಚಕಾರವೆತ್ತದೆ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. ಸಮಾಜದಲ್ಲಿ ಯಾವ ರೀತಿ ಮಾತನಾಡಬೇಕೆಂಬ ಪರಿಜ್ಞಾನವಿಲ್ಲದೆ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡರು ಮಾತನಾಡಿ, ಶೋಭಾ ಕರಂದ್ಲಾಜೆಯ ಕುಟುಂಬದಲ್ಲಿ ಯಾರೂ ಸಾಯುತ್ತಿಲ್ಲ. ಅವರು ಹೋದ ಸ್ಥಳದಲ್ಲೆಲ್ಲ ಅಮಾಯಕರು ಸಾಯುತ್ತಿದ್ದಾರೆ. ಮೂಡಿಗೆರೆಯ ಧನ್ಯಶ್ರೀ ಆತ್ಮಹತ್ಯೆ, ದಾನಮ್ಮನವರ ಬಗ್ಗೆ ಒಂದೇ ಒಂದು ಮಾತು ಸಹ ಇವರು ಮಾತನಾಡಿಲ್ಲ ಎಂದು ದೂರಿದರು.

ಕಿಸಾನ್ ಸೆಲ್ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್ ಮಾತನಾಡಿ 2 ಲಕ್ಷ ಮತಗಳಿಂದ ಆಶೀರ್ವಾದ ಪಡೆದ ಸದಸ್ಯರು ಜಿಲ್ಲೆಯ ಜನರಿಗೆ ದ್ರೋಹ ಎಸಗುತ್ತಿದ್ದಾರೆ. ಜಿಲ್ಲೆಯನ್ನು ಮರೆತಿದ್ದಾರೆ ಎಂದರು.
ನಗರ ಸಭೆ ವಿರೋಧ ಪಕ್ಷದ ಕಾಂಗ್ರೆಸ್ ನಾಯಕ ರೂಬೆನ್ ಮೊಸಸ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲದ ಸದಸ್ಯರು ಕೇವಲ ಮಾಧ್ಯಮಗಳಲ್ಲಿ ಮಾತ್ರ ತಮ್ಮ ಅರಕಲು ಬಾಯಿ ಪ್ರದರ್ಶಿಸುತಿದ್ದಾರೆ. ನಗರಸಭೆಯಲ್ಲಿ ಎಂ.ಪಿ ಮತ್ತು ಎಂ.ಎಲ್.ಸಿ ಕಚೇರಿಗೆ ಅವಕಾಶ ನೀಡಿ ಸಾರ್ವಜನಿಕರ ಸೇವೆಗೆ ತೊಂದರೆ ಉಂಟಾಗುತ್ತಿದೆ. ಈ ಕಚೇರಿಯಿಂದ ಸಾರ್ವಜನಿಕರಿಗೆ ಯಾವ ಉಪಯೋಗವು ಆಗುತ್ತಿಲ್ಲ. ತಕ್ಷಣ ಈ ಕಚೇರಿಗಳನ್ನು ನಗರಸಭೆ ಆವರಣದ ಹೊರಗೆ ಹಾಕಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ನಂತರ ಕಚೇರಿಗೆ ಮುತ್ತಿಗೆ ಹಾಕಲು ಹೋದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು. ಪ್ರತಿಭಟನೆಯಲ್ಲಿ ಐ.ಟಿ. ಸೆಲ್ ಪ್ರಧಾನ ಕಾರ್ಯದರ್ಶಿ ಝಮೀರ್ ಪಾಶ, ಉಪಾಧ್ಯಕ್ಷ ಕಿರಣ್, ಆಲ್ದೂರು ಅಧ್ಯಕ್ಷ ಕಿರಣ್, ಐ.ಟಿ. ಸೆಲ್‌ನ ಭರತ್, ಚೈತ್ರಾ, ಶ್ವೇತಾ, ಬಿಂದೂ, ಮೇಘನಾ, ದೀಕ್ಷೀತ್, ಜಿಲ್ಲಾ ಸೇವಾದಳದ ಅಧ್ಯಕ್ಷ ಸಿಲ್ವರ್ ಸ್ಟರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಬಿ.ಎಂ.ಸಂದೇಶ್, ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ನಿಸಾರ್ ಅಹಮದ್, ತನ್ವೀರ್ ಅಹಮದ್, ಓಂಕಾರೆ ಗೌಡ, ಶಾದಾಬ್, ಚೇತನ, ಜೇಮ್ಸ್ ಡಿಸೋಜ, ಹೆಬ್ಬಳ್ಳಿ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News