ಮಾಧ್ಯಮಗಳಿಂದ ವಿಚಾರಣೆಗೆ ಕೇರಳ ಹೈಕೋರ್ಟ್‌ನ ಬ್ರೇಕ್

Update: 2018-01-19 14:14 GMT

ತಿರುವನಂತಪುರ,ಜ.19: 2014ರ ಬಾರ್ ಹಗರಣ ಪ್ರಕರಣದಲ್ಲಿ ಇನ್ನಷ್ಟು ಮಾಧ್ಯಮ ವಿಚಾರಣೆಗಳು ನಡೆಯಬಾರದು ಎಂದು ಕೇರಳ ಉಚ್ಚ ನ್ಯಾಯಾಲಯವು ಶುಕ್ರವಾರ ಆದೇಶಿಸಿದೆ. ಜಾಗ್ರತ ಇಲಾಖೆಯು ಎರಡು ದಿನಗಳ ಹಿಂದೆ ಪ್ರಕರಣದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ವರದಿ ಮಾಧ್ಯಮಗಳ ಕೈ ಸೇರಿದ್ದು ಹೇಗೆ ಎಂದೂ ಕುಪಿತ ನ್ಯಾಯಾಲಯವು ಪ್ರಶ್ನಿಸಿತು.

ಕೇರಳದ ಮಾಜಿ ವಿತ್ತ ಸಚಿವ ಕೆ.ಎಂ.ಮಣಿ ಅವರನ್ನು ಆರೋಪಮುಕ್ತಗೊಳಿಸಿರುವ ತನ್ನ ವರದಿಯ ಸೋರಿಕೆಯ ಕುರಿತು ಜಾಗ್ರತ ಇಲಾಖೆಯು ಈಗಾಗಲೇ ತನಿಖೆಯನ್ನಾರಂಭಿಸಿದೆ.

 ಮಣಿ ಅವರು 2014ರಲ್ಲಿ ಒಂದು ಕೋಟಿ ರೂ.ಲಂಚ ಸ್ವೀಕರಿಸಿದ್ದ ಬಗ್ಗೆ ಸಾಕಷ್ಟು ಸಾಕ್ಷಾಧಾರಗಳಿಲ್ಲ ಎಂದು ಮಾಧ್ಯಮಗಳಿಗೆ ಸೋರಿಕೆಯಾಗಿದ್ದ ವರದಿಯು ಹೇಳಿದ್ದು, ಇದರೊಂದಿಗೆ ಬುಧವಾರ ಪ್ರಕರಣವು ದಿಢೀರ ತಿರುವು ಪಡೆದುಕೊಂಡಿತ್ತು.

ನೂತನ ಅಬಕಾರಿ ನೀತಿಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಚ್ಚಲ್ಪಟ್ಟಿರುವ ಎಲ್ಲ ಬಾರ್‌ಗಳ ಪುನರಾರಂಭಕ್ಕೆ ಅವಕಾಶ ನೀಡುವುದಾಗಿ ಮಣಿಯವರ ಭರವಸೆಗಾಗಿ ಅವರಿಗೆ ಒಂದು ಕೋ.ರೂ.ಲಂಚವನ್ನು ನೀಡಲಾಗಿತ್ತು ಎಂದು 2014,ಅಕ್ಟೋಬರ್‌ನಲ್ಲಿ ಬಾರ್ ಮಾಲಕ ಬಿಜು ರಮೇಶ ಆರೋಪಿಸಿದ್ದರು.

ಮಣಿ ಕುರಿತ ಜಾಗ್ರತ ಇಲಾಖೆಯ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದ ಬೆನ್ನಿಗೇ ‘ಪ್ರಕರಣಗಳನ್ನು ನಿರ್ವಹಿಸುತ್ತಿರುವ ರೀತಿ’ಯ ಬಗ್ಗೆ ಮಾಧ್ಯಮಗಳು ವಿಚಾರಣೆಯನ್ನು ಆರಂಭಿಸಿದ್ದವು.

ಮುಂದಿನ 45 ದಿನಗಳಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸುವಂತೆ ಜಾಗ್ರತ ಇಲಾಖೆಗೆ ಸೂಚಿಸಿರುವ ನ್ಯಾಯಾಲಯವು, ಅಲ್ಲಿಯವರೆಗೆ ಮಾಧ್ಯಮಗಳಲ್ಲಿ ಎಲ್ಲ ಬಗೆಯ ಚರ್ಚೆಗಳನ್ನು ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News