ಡೋಕಾ ಲದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ಪ್ರಶ್ನಿಸುವ ಅಧಿಕಾರ ಭಾರತಕ್ಕಿಲ್ಲ: ಚೀನಾ

Update: 2018-01-19 16:53 GMT

ಬೀಜಿಂಗ್, ಜ. 19: ತಾನು ಡೋಕಾ ಲದಲ್ಲಿ ಮೂಲಸೌಕರ್ಯವನ್ನು ನಿರ್ಮಿಸುತ್ತಲೇ ಇರುತ್ತೇನೆ, ಆದರೆ ತನ್ನದೇ (ಚೀನಾದ) ಭೂಭಾಗದಲ್ಲಿ ನಡೆಯುವ ನಿರ್ಮಾಣ ಚಟುವಟಿಕೆಗಳ ಬಗ್ಗೆ ಹೇಳಿಕೆ ನೀಡುವ ಅಧಿಕಾರ ಭಾರತಕ್ಕಿಲ್ಲ ಎಂದು ಚೀನಾ ಶುಕ್ರವಾರ ಹೇಳಿದೆ.

ವಿವಾದಾಸ್ಪದ ವಲಯದಲ್ಲಿ ಕಳೆದ ವರ್ಷ ಭಾರತ ಮತ್ತು ಚೀನಾ ಸೈನಿಕರ ನಡುವೆ ಮುಖಾಮುಖಿ ಏರ್ಪಟ್ಟ ಸ್ಥಳದಿಂದ ಕೇವಲ 81 ಮೀಟರ್ ಅಂತರದಲ್ಲಿ ಭಾರೀ ಪ್ರಮಾಣದಲ್ಲಿ ನಿರ್ಮಾಣ ಚಟುವಟಿಕೆಗಳು ನಡೆಯುತ್ತಿರುವುದನ್ನು ಉಪಗ್ರಹ ಚಿತ್ರಗಳು ತೋರಿಸಿರುವುದನ್ನು ಸ್ಮರಿಸಬಹುದಾಗಿದೆ.

‘‘ಇಂಥ ಚಿತ್ರಗಳನ್ನು ಯಾರು ಕೊಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅದರ ಬಗ್ಗೆ ವಿಸ್ತೃತ ಮಾಹಿತಿಯೂ ನನ್ನಲ್ಲಿಲ್ಲ’’ ಎಂದು ಚೀನಾ ವಿದೇಶ ಸಚಿವಾಲಯದ ವಕ್ತಾರ ಲು ಕಾಂಗ್ ಹೇಳಿದರು.

‘‘ಒಂದು ವಿಷಯವನ್ನು ನಾನು ಸ್ಪಷ್ಟಪಡಿಸುತ್ತೇನೆ. ಡಾಂಗ್ಲಾಂಗ್ (ಡೋ ಕಾಲ) ಯಾವತ್ತೂ ಚೀನಾಕ್ಕೆ ಸೇರಿದ್ದಾಗಿದೆ ಹಾಗೂ ಚೀನಾದ ಸ್ಪಷ್ಟ ವ್ಯಾಪ್ತಿಯಲ್ಲಿದೆ. ಈ ವಿಷಯದಲ್ಲಿ ಯಾವುದೇ ವಿವಾದವಿಲ್ಲ’’ ಎಂದು ಲು ಹೇಳಿದರು.

‘‘ಚೀನಾ ತನ್ನದೇ ಭೂಭಾಗದಲ್ಲಿ ತನ್ನ ಸಾರ್ವಭೌಮತೆಯನ್ನು ಚಲಾಯಿಸುತ್ತಿದೆ. ಅದು ಕಾನೂನುಬದ್ಧ ಹಾಗೂ ಸಮರ್ಥನೀಯ. ಭಾರತದ ಭೂಭಾಗದಲ್ಲಿ ಭಾರತ ನಡೆಸುತ್ತಿರುವ ಮೂಲಸೌಕರ್ಯ ನಿರ್ಮಾಣಗಳ ಬಗ್ಗೆ ಚೀನಾ ಹೇಗೆ ಯಾವುದೇ ಹೇಳಿಕೆ ನೀಡುವುದಿಲ್ಲವೋ, ಚೀನಾ ತನ್ನದೇ ಭೂಭಾಗದಲ್ಲಿ ನಡೆಸುತ್ತಿರುವ ಮೂಲಸೌಕರ್ಯ ಅಭಿವೃದ್ಧಿಗಳ ಬಗ್ಗೆ ಇತರ ದೇಶಗಳು ಹೇಳಿಕೆ ನೀಡುವುದಿಲ್ಲ ಎಂದು ನಾವು ಆಶಿಸುತ್ತೇವೆ’’ ಎಂದು ಲು ಹೇಳಿದರು.

ಬಿಕ್ಕಟ್ಟು ನಿಂತರೂ, ಚೀನಾ ಕಾಮಗಾರಿ ಅಬಾಧಿತ

ಡೋ ಕಾಲ ತನಗೆ ಸೇರಿದ್ದು ಎಂದು ಚೀನಾ ಹೇಳುತ್ತಿರುವಂತೆಯೇ, ಈ ಭೂಭಾಗ ತನಗೆ ಸೇರಿದ್ದು ಎಂದು ಭೂತಾನ್ ಕೂಡ ಹೇಳುತ್ತಿದೆ. ಕಳೆದ ವರ್ಷ ಈ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಂಡಾಗ ಭಾರತ ಅದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿತ್ತು. ಉಭಯ ದೇಶಗಳ ಸೈನಿಕರ ನಡುವೆ ತಳ್ಳಾಟ ನಡೆದಿತ್ತು ಹಾಗೂ ಸೈನಿಕರು ಮುಖಾಮುಖಿಯಾಗಿ ನಿಂತಿದ್ದರು. ಈ ಬಿಕ್ಕಟ್ಟು 73 ದಿನಗಳ ಕಾಲ ನಡೆದಿತ್ತು.

ಮುಖಾಮುಖಿ ಸ್ಥಳದಿಂದ ಉಭಯ ದೇಶಗಳ ಸೈನಿಕರು ಆಗಸ್ಟ್‌ನಲ್ಲಿ ಹಿಂದಕ್ಕೆ ಸರಿಯುವ ಮೂಲಕ ಬಿಕ್ಕಟ್ಟು ಶಮನಗೊಂಡರೂ, ಈ ವಲಯದಲ್ಲಿ ತನ್ನ ಸ್ಥಿತಿಯನ್ನು ಭದ್ರಪಡಿಸಿಕೊಳ್ಳಲು ಚೀನಾ ಬೃಹತ್ ಪ್ರಮಾಣದಲ್ಲಿ ಮೂಲಸೌಕರ್ಯ ನಿರ್ಮಾಣದಲ್ಲಿ ತೊಡಗಿದೆ ಎಂಬುದಾಗಿ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News