ಮುಸ್ಲಿಂ ವ್ಯಕ್ತಿಯ ಸಜೀವ ದಹನದ ವೀಡಿಯೊ ‘ಭಯಾನಕ’ವೆಂದು ಬಣ್ಣಿಸಿದ ಸುಪ್ರೀಂ ಕೋರ್ಟ್

Update: 2018-01-19 17:29 GMT

ಹೊಸದಿಲ್ಲಿ,ಜ.19: ಕಳೆದ ವರ್ಷದ ಡಿ.6ರಂದು ರಾಜಸ್ಥಾನದ ರಾಜಸಮಂದ್ ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳದ ಕೂಲಿ ಕಾರ್ಮಿಕನೋರ್ವನನ್ನು ಥಳಿಸಿ ಸಜೀವ ದಹನಗೊಳಿಸಿದ ದೃಶ್ಯವಿರುವ ವೀಡಿಯೊವನ್ನು ‘ಭಯಾನಕ’ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಬಣ್ಣಿಸಿದೆ.

ಈ ಬರ್ಬರ ಹತ್ಯೆಯ ಕುರಿತು ವಿಶೇಷ ತನಿಖಾ ತಂಡದಿಂದ ನಿಷ್ಪಕ್ಷಪಾತ ತನಿಖೆಯನ್ನು ಕೋರಿ ಹತ ಮುಹಮ್ಮದ್ ಭಟ್ಟಾ ಶೇಖ್(50) ಅವರ ಪತ್ನಿ ಗುಲ್‌ಬಹಾರ್ ಬೀಬಿ ಸಲ್ಲಿಸಿರುವ ಅರ್ಜಿಯ ಕುರಿತು ನೋಟಿಸ್‌ನ್ನು ಜಾರಿಗೊಳಿಸಲು ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ಪೀಠವು ಒಲವು ವ್ಯಕ್ತಪಡಿಸಿತು.

ಇದೊಂದು ಭಯಾನಕ ವೀಡಿಯೊ ಎಂದು ಹೇಳಿದ ಪೀಠವು ಅರ್ಜಿಯನ್ನು ಪರಿಶೀಲಿಸಲು ಮತ್ತು ಸೂಕ್ತ ನಿರ್ದೇಶಗಳನ್ನು ನೀಡಲು ತಾನು ಸಿದ್ಧವಿರುವುದಾಗಿ ತಿಳಿಸಿತು.

ಆದರೆ ಅರ್ಜಿಯ ಬರಹವು ಕೆಟ್ಟದ್ದಾಗಿದೆ ಎಂದು ಹೇಳಿದ ನ್ಯಾಯಾಲಯವು, ಅದನ್ನು ತಿದ್ದಿ ಸಲ್ಲಿಸುವಂತೆ ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರಿಗೆ ಸೂಚಿಸಿ, ಮುಂದಿನ ವಿಚಾರಣೆಯನ್ನು ಜ.29ಕ್ಕೆ ನಿಗದಿಗೊಳಿಸಿತು.

ಲಕ್ಷಾಂತರ ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಜೈಸಿಂಗ್, ಅದನ್ನು ಅಂತರ್ಜಾಲದಿಂದ ತೆಗೆದುಹಾಕಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನಿರ್ದೇಶವನ್ನು ನೀಡುವಂತೆ ಕೋರಿಕೊಂಡರು.

ಆರೋಪಿಯ ಬೆಂಬಲಿಗರು ನ್ಯಾಯಾಂಗ ಪ್ರಕ್ರಿಯೆಗೆ ತಡೆಯೊಡ್ಡಲು ಪ್ರಯತ್ನಿಸುತ್ತಿ ರುವುದರಿಂದ ಸಂತ್ರಸ್ತರಿಗೆ ನ್ಯಾಯ ಪಡೆಯುವ ಮೂಲಭೂತ ಹಕ್ಕನ್ನು ಒದಗಿಸು ವಂತೆಯೂ ಅವರು ಕೋರಿದರು.

ಮುಹಮ್ಮದ್ ಅವರ ಹತ್ಯೆಯ ಘೋರದೃಶ್ಯವನ್ನು ಆರೋಪಿ ಶಂಭುಲಾಲ್ ರೇಗರ್‌ನ ಸೋದರಳಿಯ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದ. ಆರೋಪಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಶೇಖ್ ಹತ್ಯೆ ಬಳಿಕ ರೇಗರ್ ’ಲವ್ ಜಿಹಾದ್’ನ್ನು ನಿಲ್ಲಿಸಲು ತಾನು ಈ ಕೊಲೆಯನ್ನು ಮಾಡಿದ್ದೇನೆ. ಲವ್ ಜಿಹಾದ್ ನಡೆಸುವವರು ಇಂತಹುದೇ ಅಂತ್ಯವನ್ನು ಕಾಣಲಿದ್ದಾರೆ ಎಂದು ಅಬ್ಬರಿಸುವ ದೃಶ್ಯವೂ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News