ಪ್ರಪಂಚೋಧ್ಯ

Update: 2018-01-19 18:08 GMT

ಮಲೇಶ್ಯಾದ ಸುಲ್ತಾನ್‌ಗೆ ದೈತ್ಯ ಗಾತ್ರದ

ಕಾರಿನ ಪ್ರತಿಕೃತಿಯ ಉಡುಗೊರೆ!

ಈಗಿನ ಜೆಟ್‌ಯುಗದಲ್ಲಿ, ಮಲೇಶ್ಯಾದ ಸುಲ್ತಾನರೊಬ್ಬರಿಗೆ ದೊರೆತ ಉಡುಗೊರೆ ಯಾವುದು ಗೊತ್ತೇ?. 60ರ ದಶಕದ ಜನಪ್ರಿಯ ಕಾರ್ಟೂನ್ ‘ಫ್ರೆಡ್ ಫ್ಲಿನ್‌ಸ್ಟೋನ್’ ನಲ್ಲಿ ಚಿತ್ರಿಸಲಾದ ದೈತ್ಯಗಾತ್ರದ ಕಾರಿನ ಪ್ರತಿಕೃತಿಯೊಂದು ಅವರಿಗೆ ಜನ್ಮದಿನದ ಉಡುಗೊರೆಯಾಗಿ ದೊರೆತಿದೆ.

  ಮಲೇಶ್ಯಾದ ಅತ್ಯಂತ ಪ್ರಭಾವಿ ಹಾಗೂ ಶ್ರೀಮಂತ ರಾಜ್ಯವಾದ ಜೊಹೊರ್‌ನ ಸುಲ್ತಾನ್ ಇಬ್ರಾಹೀಂ ಸುಲ್ತಾನ್ ಇಸ್ಕಂದರ್‌ಗೆ, ಅವರಿಗೆ ಪಹಾಂಗ್ ರಾಜ್ಯದ ಯುವರಾಜನಿಂದ ಈ ಉಡುಗೊರೆ ಲಭಿಸಿದೆ. ‘ಫ್ಲಿನ್‌ಸ್ಟೋನ್ಸ್’ , ಇಬ್ರಾಹೀಂ ಸುಲ್ತಾನ್ ಅವರ ಅಚ್ಚುಮೆಚ್ಚಿನ ಕಾರ್ಟೂನ್ ಆಗಿದ್ದು, ಅದರಲ್ಲಿ ಚಿತ್ರಿಸಲಾದ ಕಾರನ್ನೇ ಈ ಪ್ರತಿಕೃತಿಯು ಯಥಾವತ್ತಾಗಿ ಹೋಲುತ್ತದೆ. ಈ ಕಾರಿನ ಎರಡೂ ಭಾಗಗಳು ಮರದ ಬಣ್ಣದ ಫಿನಿಶಿಂಗ್ ಟಚ್ ಹೊಂದಿದ್ದರೆ, ಅದರ ಚಕ್ರಗಳು ಕಲ್ಲಿನಂತಹ ಫಿನಿಶಿಂಗ್ ಹೊಳಪನ್ನು ಪಡೆದಿವೆ. ಸಾಲದ್ದಕ್ಕೆ ಬಟ್ಟೆಯ ಮಾಡನ್ನು ಕೂಡಾ ಹೊದಿಸಲಾಗಿದೆ.

  ಈ ಅದ್ಭುತವಾದ ಕಾರಿನ ಉಡುಗೊರೆಯಿಂದ ಸುಲ್ತಾನ್ ಇಬ್ರಾಹೀಂ ಆನಂದ ತುಂದಿಲರಾಗಿದ್ದಾರೆ. ಫ್ರೆಡ್ ಫ್ಲಿನ್‌ಸ್ಟೋನ್ ಕಾರ್ಟೂನ್‌ನಲ್ಲಿನ ಜನಪ್ರಿಯ ಘೋಷಣೆಯಾದ ‘ಯಬ್ಬಾ ಡಬ್ಬಾ ಡೂ’ ಎಂಬ ಪದದೊಂದಿಗೆ ಸುಲ್ತಾನ್ ತನ್ನ ಫೇಸ್‌ಬುಕ್ ಪುಟದಲ್ಲಿ ಈ ದೈತ್ಯ ಕಾರಿನ ಪ್ರತಿಕೃತಿಯ ಛಾಯಾಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಸುಲ್ತಾನ್ ಇಬ್ರಾಹೀಂ ಬಳಿ ರೋಲ್ಸ್‌ರಾಯ್ಸ್ ಹಾಗೂ ಮೂರು ಚಕ್ರಗಳ ವಿಂಟೇಜ್ ಕಾರು ಸೇರಿದಂತೆ ವೈವಿಧ್ಯಮಯ ವಾಹನಗಳ ಸಂಗ್ರಹವೇ ಇದೆ. ಕಳೆದ ವರ್ಷ ಸುಲ್ತಾನ್ ಹಾಗೂ ಅವರ ಕುಟುಂಬವು ಮೂರು ಚಕ್ರಗಳ ವಿಂಟೇಜ್ ಕಾರಿನಲ್ಲಿ ಜೊಹೊರ್ ರಾಜ್ಯಾದ್ಯಂತ ಸಂಚರಿಸಿ, ಪ್ರಜೆಗಳನ್ನು ಭೇಟಿ ಮಾಡಿದ್ದರು.

ಚಿಟ್ಟೆಯ ರೆಕ್ಕೆಗೆ ಶಸ್ತ್ರಚಿಕಿತ್ಸೆ: ಫ್ಯಾಶನ್ ಡಿಸೈನರ್ ಸಾಧನೆ!

 ಚಿಟ್ಟೆಗೂ ಹಾರಲು ಕಲಿಸಬೇಕೇ?. ಹೌದು. ಅಮೆರಿಕದ ವಸ್ತ್ರ ವಿನ್ಯಾಸಕಿಯೊಬ್ಬರು ತನ್ನ ನೈಪುಣ್ಯತೆಯನ್ನು ಬಳಸಿ, ಗಾಯಗೊಂಡ ಚಿಟ್ಟೆಗೆ ಮತ್ತೆ ಹಾರಲು ಸಾಧ್ಯವಾಗುವಂತೆ ಮಾಡಿದ್ದಾರೆ. ಚಿಟ್ಟೆಯ ಹರಿದುಹೋದ ರೆಕ್ಕೆಗಳನ್ನು ಆಕೆ ಸರಿಪಡಿಸುವ ವೀಡಿಯೊವನ್ನು ವೀಕ್ಷಿಸಿ ಹಲವಾರು ಮಂದಿಯ ಹೃದಯ ಮಿಡಿದಿದೆ. ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ವಸ್ತ್ರ ವಿನ್ಯಾಸಕಿಯ ವೀಡಿಯೊ ವೈರಲ್ ಆಗಿದ್ದು 15 ಸಾವಿರಕ್ಕೂ ಅಧಿಕ ಮಂದಿ ಪ್ರತಿಕ್ರಿಯಿಸಿದ್ದಾರೆ. ಜನವರಿ 8ರಿಂದೀಚೆಗೆ 20,400ಕ್ಕೂ ಅಧಿಕ ಮಂದಿ ಈ ವೀಡಿಯೊ ಶೇರ್ ಮಾಡಿದ್ದಾರೆ.

 ವಸ್ತ್ರ ವಿನ್ಯಾಸಕಿ ರೊಮಿ ಮ್ಯಾಕ್ಲೊಸ್ಕೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಆಕೆಯ ಮನೆಯ ಹಿತ್ತಲಲ್ಲಿ ಎರಡು ಮಿಡತೆಗಳನ್ನು ಹಿಡಿದು ಸಾಕತೊಡಗಿದ್ದಳು. ಆವಾಗಿನಿಂದ ಆಕೆಗೆ ಚಿಟ್ಟೆಗಳನ್ನು ಸಾಕುವ ಹವ್ಯಾಸ ಶುರುಹಚ್ಚಿಕೊಂಡಿತು. ಆಕೆ ಸಾಕಿದ್ದ ಚಿಟ್ಟೆಯೊಂದು ಗೂಡು ಒಡೆದು ಹೊರಬಂದ ಮೂರು ದಿನಗಳಲ್ಲಿ ಅದರ ರೆಕ್ಕೆ ಮುರಿದಿತ್ತು. ಆನಂತರ ಆಕೆಯ ಸ್ನೇಹಿತರೊಬ್ಬರು ವೀಡಿಯೊವೊಂದನ್ನು ಕಳುಹಿಸಿ, ಈ ಮರಿ ಚಿಟ್ಟೆಯ ರೆಕ್ಕೆಗಳನ್ನು ಹೇಗೆ ಸರಿಪಡಿಸಬಹುದೆಂಬ ಬಗ್ಗೆ ಮಾರ್ಗದರ್ಶನ ನೀಡಿದ್ದರು. ಈ ಮೊದಲು ಸತ್ತಿದ್ದ ಚಿಟ್ಟೆಯೊಂದರ ರೆಕ್ಕೆಗಳನ್ನು ಈ ಚಿಟ್ಟೆಗೆ ಕಸಿಮಾಡಿದ್ದಾರೆ.

ಈ ಕುರಿತ ಏಳು ಛಾಯಾಚಿತ್ರಗಳನ್ನು ಮ್ಯಾಕ್ಲೊಸ್ಕೆ ವೀಡಿಯೊದಲ್ಲಿ ಪ್ರಸಾರ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News