ಆಸ್ಟ್ರೇಲಿಯ ವಿರುದ್ಧ ಇಂಗ್ಲೆಂಡ್‌ಗೆ ಸುಲಭ ಜಯ

Update: 2018-01-19 18:20 GMT

ಬ್ರಿಸ್ಬೇನ್, ಜ.19: ಒಗ್ಗಟ್ಟಿನ ಪ್ರದರ್ಶನ ನೀಡಿದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ನೆರವಿನಿಂದ ಇಂಗ್ಲೆಂಡ್ ತಂಡ ಆಸ್ಟ್ರೇಲಿಯ ವಿರುದ್ಧ ಶುಕ್ರವಾರ ನಡೆದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 4 ವಿಕೆಟ್‌ಗಳ ಜಯ ದಾಖಲಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.

ಗೆಲ್ಲಲು 271 ರನ್ ಸವಾಲು ಪಡೆದಿದ್ದ ಇಂಗ್ಲೆಂಡ್ ಇನ್ನೂ 34 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು. ಇಂಗ್ಲೆಂಡ್ ಇನ್ನೊಂದು ಪಂದ್ಯದಲ್ಲಿ ಜಯ ಸಾಧಿಸಿದರೆ ಸರಣಿ ವಶಪಡಿಸಿಕೊಳ್ಳಲಿದೆ.

 ಆಸ್ಟ್ರೇಲಿಯದ ಆ್ಯರೊನ್ ಫಿಂಚ್ ಸಿಡಿಸಿದ ಸತತ ಎರಡನೇ ಶತಕ ವ್ಯರ್ಥವಾಯಿತು. ಮೊದಲ ಪಂದ್ಯದಲ್ಲಿ 107 ರನ್ ಗಳಿಸಿದ್ದ ಫಿಂಚ್ ಎರಡನೇ ಪಂದ್ಯದಲ್ಲಿ ಶ್ರೇಷ್ಠ ಫಾರ್ಮ್ ಮುಂದುವರಿಸಿ 106 ರನ್ (114 ಎಸೆತ, 9 ಬೌಂಡರಿ, 1 ಸಿಕ್ಸರ್)ಗಳಿಸಿದರು. ಈ ಮೂಲಕ ಆಸ್ಟ್ರೇಲಿಯ 9 ವಿಕೆಟ್‌ಗಳ ನಷ್ಟಕ್ಕೆ 270 ರನ್ ಗಳಿಸಲು ನೆರವಾದರು. ಆಸೀಸ್ ಪರ ಮಿಚೆಲ್ ಮಾರ್ಷ್(36), ಡೇವಿಡ್ ವಾರ್ನರ್(35),ಅಲೆಕ್ಸ್ ಕಾರೆ(27) ಎರಡಂಕೆಯ ಸ್ಕೋರ್ ದಾಖಲಿಸಿದರು. ಇಂಗ್ಲೆಂಡ್‌ನ ಆದಿಲ್ ರಶೀದ್ 10 ಓವರ್‌ಗಳಲ್ಲಿ 71 ರನ್ ನೀಡಿದ್ದರೂ 2 ಪ್ರಮುಖ ವಿಕೆಟ್(2-71) ಪಡೆದರು. ರಶೀದ್‌ಗೆ ಪಾರ್ಟ್‌ಟೈಮ್ ಸ್ಪಿನ್ನರ್ ಜೋ ರೂಟ್(2-31) ಸಾಥ್ ನೀಡಿದರು.

ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಆರಂಭಿಕ ಆಟಗಾರ ಜೇಸನ್ ರಾಯ್(2) ಇಂಗ್ಲೆಂಡ್ ಇನಿಂಗ್ಸ್ ನ ಮೊದಲ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನೋರ್ವ ಆರಂಭಿಕ ಆಟಗಾರ ಜಾನಿ ಬೈರ್‌ಸ್ಟೋವ್ 60 ರನ್(56 ಎಸೆತ, 9 ಬೌಂಡರಿ) ಗಳಿಸಿದ್ದಲ್ಲದೆ ಅಲೆಕ್ಸ್ ಹೇಲ್ಸ್(57)ರೊಂದಿಗೆ ಎರಡನೇ ವಿಕೆಟ್‌ಗೆ 117 ರನ್ ಸೇರಿಸಿದರು.

ಇಂಗ್ಲೆಂಡ್ ಬೈರ್‌ಸ್ಟೋವ್ ಹಾಗೂ ಹೇಲ್ಸ್ ವಿಕೆಟ್‌ನ್ನು ಕ್ಷಿಪ್ರವಾಗಿ ಕಳೆದುಕೊಂಡಿತು. ಆಗ ತಂಡಕ್ಕೆ ಆಸರೆಯಾದ ಟೆಸ್ಟ್ ನಾಯಕ ಜೋ ರೂಟ್ ಹಾಗೂ ವಿಕೆಟ್‌ಕೀಪರ್ ಜೋಸ್ ಬಟ್ಲರ್(42) 4ನೇ ವಿಕೆಟ್‌ಗೆ 68 ರನ್ ಜೊತೆಯಾಟ ನಡೆಸಿದರು.

 ಔಟಾಗದೆ 46 ರನ್ ಗಳಿಸಿದ ರೂಟ್ ಹಾಗೂ ಕ್ರಿಸ್ ವೋಕ್ಸ್(ಅಜೇಯ 39) 7ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 47 ರನ್ ಗಳಿಸಿದರು. ಆಸ್ಟ್ರೇಲಿಯದ ಗೆಲುವಿನ ಕನಸು ಭಗ್ನಗೊಳಿಸಿದರು. ಆಸ್ಟ್ರೇಲಿಯದ ಪರ ಸ್ಟಾರ್ಕ್(4-59) ಯಶಸ್ವಿ ಬೌಲರ್ ಎನಿಸಿಕೊಂಡರು.

ಉಭಯ ತಂಡಗಳು ರವಿವಾರ ಸಿಡ್ನಿಯಲ್ಲಿ ಮೂರನೇ ಪಂದ್ಯವನ್ನು ಆಡಲಿದ್ದು, ಸರಣಿಯಲ್ಲಿ ಸ್ಪರ್ಧೆಯಲ್ಲಿರಲು ಆಸ್ಟ್ರೇಲಿಯಕ್ಕೆ ಈ ಪಂದ್ಯವನ್ನು ಗೆಲ್ಲುವುದು ಅನಿವಾರ್ಯವಾಗಿದೆ.

ಸಂಕ್ಷಿಪ್ತ ಸ್ಕೋರ್

►ಆಸ್ಟ್ರೇಲಿಯ: 50 ಓವರ್‌ಗಳಲ್ಲಿ 270/9

(ಆ್ಯರೊನ್ ಫಿಂಚ್ 106, ಮಾರ್ಷ್ 36,ವಾರ್ನರ್ 35, ರಶೀದ್ 2-71, ಜೋ ರೂಟ್ 2-31)

►ಇಂಗ್ಲೆಂಡ್: 44.2 ಓವರ್‌ಗಳಲ್ಲಿ 274/6

(ಜಾನಿ ಬೈರ್‌ಸ್ಟೋವ್ 60, ಅಲೆಕ್ಸ್ ಹೇಲ್ಸ್ 57, ರೂಟ್ ಅಜೇಯ 46, ಜೋಸ್ ಬಟ್ಲರ್ 42, ಕ್ರಿಸ್ ವೋಕ್ಸ್ ಅಜೇಯ 39, ಮಿಚೆಲ್ ಸ್ಟಾರ್ಕ್ 4-59, ರಿಚರ್ಡ್‌ಸನ್ 2-57) (ಜಾನಿ ಬೈರ್‌ಸ್ಟೋವ್ 60, ಅಲೆಕ್ಸ್ ಹೇಲ್ಸ್ 57, ರೂಟ್ ಅಜೇಯ 46, ಜೋಸ್ ಬಟ್ಲರ್ 42, ಕ್ರಿಸ್ ವೋಕ್ಸ್ ಅಜೇಯ 39, ಮಿಚೆಲ್ ಸ್ಟಾರ್ಕ್ 4-59, ರಿಚರ್ಡ್‌ಸನ್ 2-57)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News