ಉಡುಪಿ ಜೈಲು ನವೀಕರಣ: ವಿಚಾರಣಾಧೀನ ಕೈದಿಗಳು ಕಾರವಾರ ಜೈಲಿಗೆ ಶಿಫ್ಟ್

Update: 2018-01-20 07:35 GMT

ಉಡುಪಿ, ಜ. 20: ಹಿರಿಯಡ್ಕದ ಅಂಜಾರಿನಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹದ ಗೋಡೆ ದುರಸ್ತಿ ಹಾಗೂ ನವೀಕರಣದ ಹಿನ್ನೆಲೆಯಲ್ಲಿ ಇಲ್ಲಿನ ಎಲ್ಲ 91 ವಿಚಾರಣಾಧೀನ ಕೈದಿಗಳನ್ನು ಕಾರವಾರ ಜಿಲ್ಲಾ ಕಾರಾಗೃಹಕ್ಕೆ ಶನಿವಾರ ಬೆಳಗ್ಗೆ ಸ್ಥಳಾಂತರಿಸಲಾಗಿದೆ.

ಉಡುಪಿ ಕಾರಾಗೃಹದ ಒಂದು ಬ್ಯಾರಲ್ ಹಾಗೂ ಅಡುಗೆ ಕೋಣೆಯ ಗೋಡೆಗಳು ಬಿರುಕು ಬಿಟ್ಟ ಪರಿಣಾಮ, ವರ್ಷಗಳ ಹಿಂದೆ ಗೋಡೆ ಕುಸಿದು ಬಿದ್ದಿತ್ತು. ಈ ನಿಟ್ಟಿನಲ್ಲಿ ಗೋಡೆಗಳ ಪುನರ್‌ನಿರ್ಮಾಣ ಮತ್ತು ಒಳಚರಂಡಿ ಕಾಮಗಾರಿ ಹಾಗೂ ಪೈಟಿಂಗ್ ಸೇರಿದಂತೆ ಕಾರಾಗೃಹದ ನವೀಕರಣ ಕಾರ್ಯವನ್ನು ಒಟ್ಟು 60 ಲಕ್ಷ ರೂ. ವೆಚ್ಚದಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಎಲ್ಲ 91 ವಿಚಾರಣಾಧೀನ ಕೈದಿಗಳನ್ನು ಮೂರು ತಿಂಗಳ ಅವಧಿಗೆ ಕಾರವಾರ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸ ಲಾಗಿದೆ. ಇಂದು ಬೆಳಗ್ಗೆ ಉಡುಪಿ ಪೊಲೀಸರ ಬೆಂಗಾವಲು ಪಡೆಯ ಬಿಗಿ ಭದ್ರತೆಯಲ್ಲಿ ಎಲ್ಲ ಕೈದಿಗಳನ್ನು ಕಾರವಾರಕ್ಕೆ ಕರೆದುಕೊಂಡು ಹೋಗಲಾಯಿತು.

ಇದರ ಉಸ್ತುವಾರಿ ವಹಿಸಿಕೊಂಡಿರುವ ಉಡುಪಿ ಜಿಲ್ಲಾ ಜೈಲರ್ ಈರಣ್ಣ ರಂಗಪುರ ನಿನ್ನೆಯಿಂದ ಕಾರವಾರದಲ್ಲಿಯೇ ಉಳಿದುಕೊಂಡಿದ್ದಾರೆ.
ಜೈಲಿನ ನವೀಕರಣದ ಹಿನ್ನೆಲೆಯಲ್ಲಿ ಎಲ್ಲ ಕೈದಿಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರವಾರಕ್ಕೆ ವರ್ಗಾಯಿಸಲಾಗಿದೆ. ಈ ಕೈದಿಗಳ ಜೊತೆ ಉಡುಪಿ ಕಾರಾಗೃಹದ ಎಲ್ಲ 15 ಮಂದಿ ಸಿಬ್ಬಂದಿಗಳು ಕೂಡ ಕಾರವಾರದಲ್ಲಿಯೇ ಕರ್ತವ್ಯ ನಿರ್ವಹಿಸಲಿದ್ದಾರೆ. ಮೂರು ತಿಂಗಳಲ್ಲಿ ಜೈಲಿನ ನವೀಕರಣ ಪೂರ್ಣಗೊಂಡ ಬಳಿಕ ಎಲ್ಲ ಕೈದಿಗಳನ್ನು ಮತ್ತೆ ಉಡುಪಿಗೆ ವರ್ಗಾಯಿಸಲಾಗುವುದು ಎಂದು ಜೈಲರು ಈರಣ್ಣ ರಂಗಪುರ ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News