ದೇಶದಲ್ಲಿ ಕೃಷಿಕರಿಗೆ ಅನುಕೂಲವಾಗುವಂತೆ ಕೃಷಿ ರಪ್ತು ನೀತಿ: ಸಚಿವ ಸುರೇಶ್ ಪ್ರಭು

Update: 2018-01-21 13:29 GMT

ಪುತ್ತೂರು, ಜ. 21: ದೇಶದಲ್ಲಿ ಕೃಷಿಕರಿಗೆ ಅನುಕೂಲವಾಗುವಂತೆ ಕೃಷಿ ರಪ್ತು ನೀತಿಯನ್ನು ರೂಪಿಸಲು ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ.

ಪುತ್ತೂರಿನ ಕೆಮ್ಮಿಂಜೆಯಲ್ಲಿ 42 ಸಾವಿರ ಚದರ ಅಡಿ ವಿಸ್ತೀರ್ಣದ 13 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಸೌಲಭ್ಯ ಸೌಧವನ್ನು ಅವರು ಇಂದು ಉದ್ಘಾಟಿಸಿ ಮಾತನಾಡುತಿದ್ದರು.

ಸಮಾಜದ ಪ್ರಮುಖ ಅಂಗವಾದ ರೈತರು ಸಂಕಷ್ಟಕ್ಕೀಡಾದರೆ ಅದು ನಮ್ಮ ದೇಹಕ್ಕೆ ಲಕ್ವ ಹೊಡೆದಂತೆ. ರೈತರ ಏಳಿಗೆ ಸಮಾಜದ ಏಳಿಗೆ, ದೇಶದ ಏಳಿಗೆ ಎಂದು ನಂಬಿರುವ ಪ್ರಧಾನಿ, ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯಬೇಕು ಮಾರುಕಟ್ಟೆ ದೊರೆಯಬೇಕು ಈ ನಿಟ್ಟಿನಲ್ಲಿ ಸೂಕ್ತ ನೀತಿಯನ್ನು ರೂಪಿಸಲು ನಿರ್ಧರಿಸಿದ್ದಾರೆ. ಈಗಾಗಲೇ ಕರಡು ನೀತಿ ಸಿದ್ಧವಾಗಿದೆ ಎಂದು ಸುರೇಶ್ ಪ್ರಭು ತಿಳಿಸಿದರು.

ರಬ್ಬರ್ ಬೆಳೆಗಾರರಿಗೆ ವಿಶೇಷ ನೀತಿ:- ರಬ್ಬರ್ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸೇರಿ ನೂತನವಾದ ಪ್ರತ್ಯೇಕವಾದ ನೀತಿಯನ್ನು ರೂಪಿಸಲಿದೆ. ಎಲ್ಲಾ ಕೃಷಿ ಬೆಳೆಗಳಿಗೂ ಒಂದೇ ರೀತಿಯ ನೀತಿಯನ್ನು ರೂಪಿಸಲು ಸಾಧ್ಯವಾಗುವುದಿಲ್ಲ. ಕರಿ ಮೆಣಸಿಗೆ ಕನಿಷ್ಟ ಬೆಲೆಯನ್ನು ನಿಗದಿ ಪಡಿಸಲು ನಿರ್ಧರಿಸಲಾಗಿದೆ.

ಕ್ಯಾಂಪ್ಕೊ ಅಂತಾರಾಷ್ಟ್ರೀಯ ಗುಣಮಟ್ಟದ ಸಹಕಾರಿ ಸಂಸ್ಥೆ:- ರೈತರು ತಮ್ಮ ಸಂಕಷ್ಟದ ಕಾಲದಲ್ಲಿ ನಿರ್ಮಿಸಿದ ಕ್ಯಾಂಪ್ಕೋ ಸಂಸ್ಥೆ ಇಂದು ರಾಷ್ಟ್ರಕ್ಕೆ ಮಾದರಿಯಾಗಿದೆ. ಅಲ್ಲದೆ ಬಹುರಾಷ್ಟ್ರೀಯ ಕಂಪೆನಿಗಳ ಜೊತೆ ಸ್ಪರ್ಧೆ ನಡೆಸುವ ಸಾಮರ್ಥ್ಯವನ್ನು ಪಡೆದಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಮಾದರಿ ಸಂಸ್ಥೆಯಾಗಿದೆ. ಇದನ್ನು ದೂರದೃಷ್ಟಿಯಿಂದ ಆರಂಭಿಸಿರುವ ಸಂಸ್ಥೆಯ ಸ್ಥಾಪಕರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಮುಖ್ಯ ಎಂದು ಸುರೇಶ್ ಪ್ರಭು ಶ್ಲಾಘಿಸಿದರು.

ದೇಶದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದ್ದ ರೈತರು ಸಂಕಷ್ಟಕ್ಕೆ ಈಡಾಗುತ್ತಿರುವುದು ವಿಪರ್ಯಾಸ ಇಂತಹ ಪರಿಸ್ಥಿತಿಯಲ್ಲೂ ರೈತರು ತಾವು ಬೆಳೆದ ಬೆಳೆಗಳನ್ನು ಸಂಸ್ಕೃರಿಸಲು ತೊಡಗಿರುವುದು ಅದಕ್ಕಾಗಿ ಗ್ರಾಮೀಣ ಪ್ರದೇಸದಲ್ಲಿ ತಮ್ಮದೇ ಆದ ಒಂದು ಸಹಕಾರಿ ಸಂಸ್ಥೆಯನ್ನು ನಿರ್ಮಿಸಿ ನೆಸ್ಲೆಯಂತಹ ಬಹುರಾಷ್ಟೀಯ ಕಂಪೆನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಿರುವುದು ಶ್ಲಾಘನೀಯ. ದೇಶದ ಇತರ ಕಡೆ ಸಹಕಾರಿ ಸಂಸ್ಥೆಗಳನ್ನು ಬೆಳೆಸುವ ಬಗ್ಗೆ ಮತ್ತು ಕೃಷಿ ಉತ್ಪನ್ನಗಳ ಮಾರುಕಟ್ಟೆಯ ಬಗ್ಗೆ ಸುಮಾರು 45 ದೇಶಗಳ ಖರೀದಿದಾರರ ಪ್ರತಿನಿಧಿಗಳೊಂದಿಗೆ ಅಂತಾರಾಷ್ಟ್ರೀಯ ಮಟ್ಟ ಸಮಾಲೋಚನೆಯನ್ನು ಭಾರತದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಸುರೇಶ್ ಪ್ರಭು ತಿಳಿಸಿದರು.

ಸಹಕಾರಿಗಳಿಗೆ ಪೂರಕವಾದ ಸೂಕ್ತ ನೀತಿಯ ಅಗತ್ಯವಿದೆ:- ದೇಶದಲ್ಲಿ ಸರಕಾರರೂಪಿಸುವ ಸೂಕ್ತವಾದ ನೀತಿಯಿಂದ ಕೃಷಿಕರಿಗೆ ಸಹಾಯವಾದರೆ ಸಹಕಾರಿ ರಂಗ ಬೆಳೆಯುತ್ತದೆ ಎಂದು ಸಮಾರಂಭದಲ್ಲಿ ಕಾಂಪ್ಕೋ ಸಂಸ್ಥೆಯ ಸಂಸ್ಥಾಪಕ ವಾರಣಾಸಿ ಸುಬ್ರಾಯ ಭಟ್ಟರ ಪ್ರತಿಮೆಯನ್ನು ಅನಾವರಣಗೊಳಿಸಿದ ಸಹಕಾರ ಭಾರತಿ ಮತ್ತು ಎನ್‌ಎಎಫ್‌ಸಿಯುಬಿ ಅಧ್ಯಕ್ಷ ಜೋತೀಂದ್ರ ಬಾಯಿ ಮೆಹ್ತಾ ತಿಳಿಸಿದರು.

ಕೃಷಿಕರು ತಾವು ಬೆಳೆದ ಉತ್ಪನ್ನಗಳು ಹಾಳಾಗದಂತೆ ತಡೆಯಲು ಅದನ್ನು ಸಂಸ್ಕೃರಿಸಲು ನಿರ್ಮಿಸಿದ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಇಂದು ವಿಶ್ವದ ಗಮನ ಸೆಳೆದಿದೆ. ಇದೇ ರೀತಿ ಸರಕಾರದ ನೀತಿ ಸಹಕಾರಿಗಳಿಗೆ ಪೂರಕವಾಗಿದ್ದರೆ ವಿಶ್ವ ಮಟ್ಟದ ಸಹಕಾರಿ ಸಂಸ್ಥೆಗಳು ಭಾರತದಲ್ಲಿ ಇನ್ನಷ್ಟು ಬೆಳೆಯಲು ಸಾಧ್ಯ ಎಂದು ಜ್ಯೋತೀಂದ್ರ ಬಾಯಿ ಮೆಹ್ತಾ ತಿಳಿಸಿದರು.

ಕ್ಯಾಂಪ್ಕೋ ಸಂಸ್ಥೆಯಿಂದ ತೆಂಗಿನ ಉತ್ಪನ್ನ ಸಂಸ್ಕರಣೆ ಗುರಿ:- ಏಷ್ಯಾ ಖಂಡದ ಅತ್ಯಂತ ದೊಡ್ಡ ಚಾಕಲೇಟ್ ಕಾರ್ಖಾನೆಯನ್ನು ಹೊಂದಿರುವ ಕ್ಯಾಂಪ್ಕೋ ವಿಶ್ವ ದರ್ಜೆಗೆ ಏರಲು ಕಾರಣರಾದ ಸಂಸ್ಥೆಯ ಸ್ಥಾಪಕರು, ಸಂಸ್ಥೆಯನ್ನು ಮುನ್ನಡೆಸಿದವರು ಸಂಸ್ಥೆಯ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತಿಶ್ ಚಂದ್ರ ತಿಳಿಸಿದರು.

ಒಂದು ಲಕ್ಷ ಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಕ್ಯಾಂಪ್ಕೋ ಸಂಸ್ಥೆ ಯ ಬಗ್ಗೆ ದೇಶದ ಸಮಸತ್ತಿನಲ್ಲಿ ಚರ್ಚೆ ನಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸಂಸ್ಥೆಯ ಸ್ಥಾಪಕರಾದ ವಾರಣಾಸಿ ಸುಬ್ರಾಯ ಭಟ್ಟರನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕಾಗಿದೆ. ಇಂತಹ ನೂರು ಸಂಸ್ಥೆಗಳು ದೇಶದಲ್ಲಿ ನಿರ್ಮಾಣವಾಗಬೇಕಾಗಿದೆ. ಮುಂದಿನ ಹಂತದಲ್ಲಿ ಕರಿಮೆಣಸನ್ನು ದುಪ್ಪಟ್ಟು ಗೊಳಿಸುವ ಯೋಜನೆಯನ್ನು ಹೊಂದಲಾಗಿದೆ. ತೆಂಗಿನ ಉತ್ಪನ್ನಗಳನ್ನು ಸಂಸ್ಕರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿ ಇದೆ. ಕಾವುವಿನಲ್ಲಿ ಮುಂದಿನ ಎರಡು ವರ್ಷದೊಳಗೆ ಬೃಹತ್ ಗೋದಾಮು ನಿರ್ಮಾಣಗೊಳ್ಳಲಿದೆ ಎಂದು ತಿಳಿಸಿದರು.

ಕಾವುವಿನಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗೊದಾಮಿಗೆ ಶಿಲಾನ್ಯಾಸವನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದರು. ನೂತನ ಪ್ರೀಮಿಯಂ ಚಾಕಲೇಟ್ ಬಾಕ್ಸನ್ನು ಶಾಸಕಿ ಶಕುಂತಳಾ ಶೆಟ್ಟ ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಸ್ವಾಗತಿಸಿ, ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ ಎಂ.ವಂದಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು, ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ, ಪುತ್ತೂರು ನಗರ ಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News