ದಕ್ಷಿಣ ಸುಡಾನ್‍: ಎರಡೂವರೆ ಲಕ್ಷ ಮಕ್ಕಳು ಸಾವಿನ ತೆಕ್ಕೆಯಲ್ಲಿ

Update: 2018-01-21 11:33 GMT

ಜೂಬ, ಜ. 21: ಯುದ್ಧಗ್ರಸ್ತ ಸ್ಥಿತಿ ಎದುರಿಸುತ್ತಿರುವ ದಕ್ಷಿಣ ಸುಡಾನ್‍ನಲ್ಲಿ ಎರಡೂವರೆ ಲಕ್ಷ ಮಕ್ಕಳು ಸಾವಿನ ಸನಿಹದಲ್ಲಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ. ಯುನಿಸೆಫ್ ಪ್ರತಿನಿಧಿಗಳು ಎರಡು ದಿವಸಗಳ ಭೇಟಿಯ ನಂತರ ಈ ಎಚ್ಚರಿಕೆಯನ್ನು ನೀಡಿದ್ದಾರೆ. ತುರ್ತು ಕ್ರಮಗಳನ್ನು ಕೈಗೊಳ್ಳದಿದ್ದರೆ ಈ ವರ್ಷ ಜುಲೈವೇಳೆಗೆ ಎರಡೂವರೆ ಲಕ್ಷ ಮಕ್ಕಳು ಸಾವನಪ್ಪಬಹುದು ಎಂದು ಯುನಿಸೆಫ್ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.

ಯುದ್ಧದಿಂದಾಗಿ ಮಾರುಕಟ್ಟೆಯಲ್ಲಿ ಆಹಾರ ವಸ್ತುಗಳು ಲಭಿಸುವುದಿಲ್ಲ. ಇನ್ನೇನು  ಬೇಸಿಗೆ ಬರಲಿದ್ದು ನೀರಿನ ಲಭ್ಯತೆ ಕೂಡಾ ಕ್ಷೀಣಿಸಲಿದೆ. ಆದ್ದರಿಂದ ಈ ಸಂದಿಗ್ಧ ಸ್ಥಿತಿಯಿಂದ ಪಾರಾಗಲು ಇಲ್ಲಿಗೆ ತುರ್ತು ಸಹಾಯವೊದಗಿಸುವ ಕ್ರಮಕೈಗೊಳ್ಳಬೇಕಾಗಿದೆ ಎಂದು ಯುನಿಸೆಫ್ ಹೇಳಿದೆ.

ಯುದ್ಧ ಆರಂಭಗೊಂಡ ನಂತರ 25 ಲಕ್ಷ ಮಕ್ಕಳು ಮನೆತೊರೆದಿದ್ದಾರೆ. ಮೂರುಸಾವಿರ ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ. 19,000 ಮಂದಿ ಸಣ್ಣ ಪ್ರಾಯದಲ್ಲಿಯೇ ಸಶಸ್ತ್ರ ಗುಂಪುಗಳಿಗೆ ಪೂರೈಕೆಯಾಗಿದ್ದಾರೆ. ಪೋಷಕಾಂಶಯುಕ್ತ ಆಹಾರದ ಕೊರತೆ ಮಕ್ಕಳನ್ನು ಹೆಚ್ಚಾಗಿ ಕಾಡುತ್ತಿದೆ. ದಕ್ಷಿಣ ಸುಡಾನ್‍ನಲ್ಲಿ ಶೇ. 70ರಷ್ಟು ಮಕ್ಕಳಿಗೆ ಶಿಕ್ಷಣ ಲಭಿಸುವುದಿಲ್ಲ ಎಂದು ಅದು ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News