ಪ್ರಧಾನಿಯ ಸ್ವಕ್ಷೇತ್ರದಲ್ಲಿ ಜಯಿಸಿರುವುದು ಕಾಂಗ್ರೆಸ್ ನೈತಿಕ ಬಲವನ್ನು ಹೆಚ್ಚಿಸಿದೆ: ಅಹ್ಮದ್ ಪಟೇಲ್

Update: 2018-01-21 14:23 GMT

ಹೊಸದಿಲ್ಲಿ, ಜ.21: ಗುಜರಾತ್ ಚುನಾವಣಾ ಫಲಿತಾಂಶವು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂಬ ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಹಾಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಅಹ್ಮದ್ ಪಟೇಲ್ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ನಲ್ಲಿ 150 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಯನ್ನು 100 ಸ್ಥಾನಗಳ ಒಳಗೆಯೇ ನಿಯಂತ್ರಿಸಲಾಯಿತು. ಪ್ರಧಾನಿ ಮೋದಿಯವರ ಸ್ವಕ್ಷೇತ್ರದಲ್ಲಿ ಜಯಗಳಿಸಿರುವುದು ಕಾಂಗ್ರೆಸ್‌ಗೆ ನೈತಿಕ ಬಲವನ್ನು ನೀಡಿದೆ ಎಂದು ಗುಜರಾತ್ ಚುನಾವಣೆಯನ್ನು ಗೆದ್ದಿರುವ ಪಟೇಲ್ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅನೇಕ ಸಭೆಗಳನ್ನು ನಡೆಸಿದರು ಮತ್ತು ಎಲ್ಲಾ ತಂತ್ರಗಳನ್ನು ಬಳಸಿದರು. ಆದರೆ ಕಾಂಗ್ರೆಸ್ ಅದೆಲ್ಲವನ್ನೂ ಮೀರಿ ನಿಂತಿತು. ಗುಜರಾತ್ ಚುನಾವಣಾ ಫಲಿತಾಂಶ ಕಾಂಗ್ರೆಸ್ ಕಾರ್ಯಕರ್ತರಿಗೆ ಹೊಸ ಚೈತನ್ಯ ತುಂಬಿದೆ. ಅದು ಗುಜರಾತ್‌ಗೆ ಮಾತ್ರ ಸೀಮಿತವಾಗಿಲ್ಲ ಇಡೀ ದೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇದರಿಂದ ನೈತಿಕ ಸ್ಥೈರ್ಯ ಹೆಚ್ಚಿಸಿಕೊಂಡಿದ್ದಾರೆ ಎಂದು ಪಟೇಲ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ರಾಹುಲ್ ಗಾಂಧಿಯವರ ಕಠಿಣ ಪರಿಶ್ರಮ ಮತ್ತು ಅವರು ಜನರನ್ನು ತಮ್ಮ ಸಭೆಗಳಿಗೆ ಸೆಳೆದ ರೀತಿ ನಿಜವಾಗಿಯೂ ನಮ್ಮಲ್ಲಿ ಹೊಸ ಹುರುಪನ್ನು ಮೂಡಿಸಿದೆ. ಅವರಿಂದಾಗಿಯೇ ಕಾಂಗ್ರೆಸ್ ಗುಜರಾತ್‌ನಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಯಿತು. ಹಾಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಖಂಡಿತವಾಗಿಯೂ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ಯಲಿದ್ದಾರೆ ಎಂದು ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News