ಭೀಕರ ರಸ್ತೆ ಅಪಘಾತ: ನೇಮಕಾತಿ ಪರೀಕ್ಷೆ ಬರೆಯಲು ಹೊರಟಿದ್ದ 8 ಮಂದಿ ಮೃತ್ಯು

Update: 2018-01-21 14:11 GMT

ರಾಂಚಿ,ಜ.21: ಜಾರ್ಖಂಡ್‌ನ ದುಮ್ಕಾ ಜಿಲ್ಲೆಯ ಜರ್ದ ಎಂಬಲ್ಲಿ ರವಿವಾರ ಲಾರಿಯೊಂದು ಕಾರಿಗೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗದ ಪಂಚಾಯತ್ ಕಾರ್ಯದರ್ಶಿಗಳ ನೇಮಕಾತಿ ಪರೀಕ್ಷೆಗೆ ಹಾಜರಾಗಲು ದೇವಗಢಕ್ಕೆ ತೆರಳುತ್ತಿದ್ದ ಎಂಟು ಜನರು ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ದುಮ್ಕಾದ ಸದರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ಬಗ್ಗೆ ತೀವ್ರ ಶೋಕವನ್ನು ವ್ಯಕ್ತಪಡಿಸಿರುವ ಜಾರ್ಖಂಡ್ ಮುಖ್ಯಮಂತ್ರಿ ರಘುವರ ದಾಸ್ ಅವರು ಗಾಯಾಳುವಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಮೃತರೆಲ್ಲರೂ ದುಮ್ಕಾ ಜಿಲ್ಲೆಯ ರಸಿಕಪುರ ನಿವಾಸಿಗಳಾಗಿದ್ದಾರೆ. ಆರು ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಅಸು ನೀಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಇದು ಒಂದೇ ವಾರದಲ್ಲಿ ಜಾರ್ಖಂಡ್‌ನಲ್ಲಿ ಸಂಭವಿಸಿರುವ ಎರಡನೇ ಭೀಕರ ಅಪಘಾತವಾಗಿದೆ. ಜ.14ರಂದು ಗುಮ್ಲಾ ಜಿಲ್ಲೆಯಲ್ಲಿ ಲಾರಿಯೊಂದು ಆಟೋರಿಕ್ಷಾಕ್ಕೆ ಅಪ್ಪಳಿಸಿದ ಪರಿಣಾಮ ಐವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News