ಲಂಡನ್: ಭೀಮಾ-ಕೊರೆಗಾಂವ್‌ ಹಿಂಸಾಚಾರದ ವಿರುದ್ಧ ದಲಿತ ಗುಂಪುಗಳ ಪ್ರತಿಭಟನೆ

Update: 2018-01-21 15:28 GMT

ಲಂಡನ್, ಜ.21: ಪ್ರಧಾನಿ ನರೇಂದ್ರ ಮೋದಿಯವರ ಹಿಂದುತ್ವ ಸರಕಾರದಿಂದ ಭಾರತದಲ್ಲಿರುವ ಲಕ್ಷಾಂತರ ದಲಿತರ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ಗಮನಿಸಬೇಕೆಂದು ಬ್ರಿಟನ್‌ನಾದ್ಯಂತ ಇರುವ ದಲಿತ ಗುಂಪುಗಳು ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದೆ.

ಈ ತಿಂಗಳ ಆರಂಭದಲ್ಲಿ ಭೀಮಾ-ಕೊರೆಗಾಂವ್‌ನಲ್ಲಿ ನಡೆದ ದಲಿತರ ವಿರುದ್ಧದ ಹಿಂಸಾಚಾರದಲ್ಲಿ 7,000ಕ್ಕೂ ಅಧಿಕ ದಲಿತರ ಮೇಲೆ ಭದ್ರತಾ ಪಡೆಗಳು ನಡೆಸಿದ ದೌರ್ಜನ್ಯ ಮತ್ತು ಬಂಧನದ ವಿರುದ್ಧ ಶನಿವಾರದಂದು ಬ್ರಿಟನ್‌ನ ಪ್ರಮುಖ ದಲಿತ ಸಂಘಟನೆಗಳು ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆ ನಡೆಸಿದವು.

ಸಂತ್ರಸ್ತರಿಗೆ ಬೆಂಬಲ ಸೂಚಿಸಿ ನಡೆಸಲಾದ ಲಂಡನ್ ಪ್ರತಿಭಟನೆಗೆ ದಕ್ಷಿಣ ಏಷ್ಯಾ ಐಕ್ಯಮತ ಚಳುವಳಿ ಸೇರಿದಂತೆ ಹಲವು ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿದವು. ಬಂಧಿತ ದಲಿತರನ್ನು ಕೂಡಲೇ ಬಿಡುಗಡೆ ಮಾಡಬೇಕು ಮತ್ತು ದಲಿತ ನಾಯಕ ಚಂದ್ರಶೇಖರ್ ಆಝಾದ್ ಅವರನ್ನು ಬಂಧಮುಕ್ತಗೊಳಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಡಾ. ಬಿ.ಆರ್ ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ಮತ್ತು ಸಂವಿಧಾನವನ್ನು ಬದಲಿಸುತ್ತೇವೆ ಎಂಬ ಅವರ ಬೆದರಿಕೆ ಜಗತ್ತಿನಾದ್ಯಂತವಿರುವ ಭಾರತೀಯರು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಇಡೀ ಭಾರತೀಯ ಸಮಾಜದ ಮೇಲೆ ಹಿಂದುತ್ವವಾದವನ್ನು ಪ್ರಧಾನಿ ಮೋದಿ ಹೇರಲು ಮುಂದಾಗಿದ್ದಾರೆಯೇ ಎಂಬ ಭಯ ಅವರನ್ನು ಕಾಡುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬರ್ಮಿಂಗ್‌ಹ್ಯಾಮ್, ಬ್ರಾಡ್‌ಫೋರ್ಡ್ ಮತ್ತು ಲಂಡನ್‌ನ ರಸ್ತೆಗಳಲ್ಲಿ ಸಾಗಿದ ಪ್ರತಿಭಟನಾ ಜಾಥಾದಲ್ಲಿ, “ನಮ್ಮ ಹೋರಾಟ ಮಾನವ ಹಕ್ಕಿಗಾಗಿ, ದಲಿತರಿಗೂ ಸಮಾನ ಹಕ್ಕು, ದಲಿತರ ಮೇಲಿನ ದೌರ್ಜನ್ಯ ನಿಲ್ಲಿಸಿ, ದ್ವೇಷದ ವಿರುದ್ಧ ನಾವು ಒಗ್ಗಟ್ಟಾಗಿದ್ದೇವೆ, ದಲಿತರ ಹಕ್ಕುಗಳು ಮಾನವ ಹಕ್ಕುಗಳು, ಮಾನವ ಜೀವಕ್ಕೆ ಬೆಲೆ ಕೊಡಿ, ಕೇವಲ ಗೋವುಗಳಿಗೆ ಮಾತ್ರವಲ್ಲ, ಹಿಂದುತ್ವವು ಭಾರತದ ಒಗ್ಗಟ್ಟಿಗೆ ಅಪಾಯವಾಗಿದೆ, ದಲಿತರ ವಿರುದ್ಧ ಜಾತ್ಯಾಧಾರಿತ ಹಿಂಸಾಚಾರವನ್ನು ಕೂಡಲೇ ನಿಲ್ಲಿಸಿ”, ಮುಂತಾದ ಬರವಣಿಗೆಗಳುಳ್ಳ ಬ್ಯಾನರ್‌ಗಳನ್ನು ಪ್ರತಿಭಟನಾಕಾರರು ಹಿಡಿದುಕೊಂಡಿದ್ದರು.

ವೆಸ್ಟ್‌ಮಿನಿಸ್ಟರ್‌ನಲ್ಲಿರುವ ಪಾರ್ಲಿಮೆಂಟ್ ಸ್ಕ್ವ್ಯಾರ್‌ನಿಂದ ಹೊರಟ ರ್ಯಾಲಿಯು ಭಾರತೀಯ ರಾಯಭಾರಿ ಕಚೇರಿಯತ್ತ ಸಾಗುವ ಮಾರ್ಗ ಮಧ್ಯೆ ಪ್ರತಿಭಟನಾಕಾರರು ದಲಿತರು, ಮುಸ್ಲಿಮರು ಮತ್ತು ಸಿಖ್ಖರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಭೀಮಾ-ಕೊರೆಗಾಂವ್ ಹಿಂಸಾಚಾರಕ್ಕೆ ಯೋಜನೆ ರೂಪಿಸಿದ ಸಂಘಪರಿವಾರದ ನಾಯಕರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಬೇಕು. ಮಹಾರಾಷ್ಟ್ರದಲ್ಲಿ ಬಂಧಿಸಲ್ಪಟ್ಟಿರುವ ಸಾವಿರಾರು ದಲಿತರನ್ನು ಬಿಡುಗಡೆ ಮಾಡಬೇಕು. ಅವರ ಮೇಲಿನ ಆರೋಪಗಳನ್ನು ಕೈಬಿಡಬೇಕು ಮತ್ತು ಜನವರಿ ಒಂದು ಮತ್ತು ಎರಡರಂದು ನಡೆದ ಘಟನೆಗಳ ಸಾರ್ವಜನಿಕ ತನಿಖೆಯಾಗಬೇಕು ಎಂದು ಆಗ್ರಹಿಸುವ ಮನವಿ ಪತ್ರವನ್ನು ಪ್ರತಿಭಟನಾಕಾರರು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News