89 ವರ್ಷದ ವೃದ್ಧನಿಗೆ 26 ವರ್ಷಗಳ ಬಳಿಕ ಶಿಕ್ಷೆ ಪ್ರಕಟ !

Update: 2018-01-21 16:14 GMT

ಹೊಸದಿಲ್ಲಿ, ಜ. 21: 1988ರಲ್ಲಿ ನಡೆದಿದ್ದ ಪ್ರಕರಣದಲ್ಲಿ 3 ತಿಂಗಳ ಜೈಲುಶಿಕ್ಷೆಗೆ ಗುರಿಯಾಗಿರುವ 89 ವರ್ಷದ ವೃದ್ಧನಿಗೆ ಶಿಕ್ಷೆಯಿಂದ ವಿನಾಯಿತಿ ನೀಡುವಂತೆ ಸುಪ್ರೀಂಕೋರ್ಟ್ ತಿಳಿಸಿದೆ.

187 ಲೀಟರ್ ಸೀಮೆಎಣ್ಣೆಯನ್ನು ತನ್ನ ರೇಷನ್ ಅಂಗಡಿಯಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿಕೊಂಡಿದ್ದ ಬಗ್ಗೆ ಪಶ್ಚಿಮ ಬಂಗಾಲದ ಮದನ್ ಮೋಹನ್ ಕಬಿರಾಜ್ ಎಂಬಾತನ ವಿರುದ್ಧ 1988ರ ಸೆ.2ರಂದು ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆದು 1990ರ ಎಪ್ರಿಲ್ 20ರಂದು ಮುರ್ಷಿದಾಬಾದ್‌ನ ವಿಶೇಷ ನ್ಯಾಯಾಲಯವೊಂದು ಅಗತ್ಯವಸ್ತುಗಳ ಕಾಯ್ದೆಯಡಿ ಕಬಿರಾಜ್ ದೋಷಿ ಎಂದು ಪರಿಗಣಿಸಿ ಆತನಿಗೆ ನಾಲ್ಕು ತಿಂಗಳ ಕಠಿಣ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಕಬಿರಾಜ್ 1990ರಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. 26 ವರ್ಷ ಸಾಗಿದ ವಿಚಾರಣೆಯ ಬಳಿಕ 2016ರ ಮೇ 3ರಂದು ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್, ಶಿಕ್ಷೆಯನ್ನು ನಾಲ್ಕು ತಿಂಗಳ ಬದಲು ಮೂರು ತಿಂಗಳಿಗೆ ಇಳಿಸಿತು.

ಈ ತೀರ್ಪನ್ನು ಪ್ರಶ್ನಿಸಿ ಕಬಿರಾಜ್ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದ. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕಬಿರಾಜ್‌ಗೆ ವಿಧಿಸಲಾಗಿರುವ ಶಿಕ್ಷೆಯ ವಿಷಯದಲ್ಲಿ ಮಧ್ಯಪ್ರವೇಶಿಸಲು ತಾನು ಬಯಸುವುದಿಲ್ಲ. ಆದರೆ ಅಪೀಲುದಾರನ ವಯಸ್ಸನ್ನು ಪರಿಗಣಿಸಿ, ಅಪರಾಧಿಗಳ ಪ್ರಮಾಣೀಕರಣ ಕಾಯ್ದೆಯ ಅನುಸಾರ ಆತನನ್ನು ದೋಷಮುಕ್ತಗೊಳಿಸಬಹುದು ಎಂದು ತೀರ್ಪು ನೀಡಿದೆ. ಆರೋಪಿಗೆ 89 ವರ್ಷ ವಯಸ್ಸಾಗಿದೆ. ಅಲ್ಲದೆ ಅಪೀಲುದಾರನ ವಿರುದ್ಧ ಇತರ ಯಾವುದೇ ಗಂಭೀರ ಆರೋಪಗಳಿಲ್ಲ. ಆದ್ದರಿಂದ ಈ ಪ್ರಕರಣದಲ್ಲಿ ‘ಅಪರಾಧಿಗಳ ಪ್ರಮಾಣೀಕರಣ ಕಾಯ್ದೆ’ಯ ನ್ನು ಅನ್ವಯಿಸಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News