ಮೋದಿಗೆ ತಾನು ಪ್ರಧಾನಿಯೆಂಬ ಅಹಂ ಇದೆ : ಅಣ್ಣಾ ಹಝಾರೆ

Update: 2018-01-21 16:22 GMT

ಹೊಸದಿಲ್ಲಿ, ಜ.21: ಭಷ್ಟಾಚಾರ ವಿರೋಧಿ ಅಭಿಯಾನದ ಮುಂಚೂಣಿಯಲ್ಲಿರುವ ಹೋರಾಟಗಾರ ಅಣ್ಣಾ ಹಝಾರೆಯವರು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದು ಮೋದಿಗೆ ತಾನು ಪ್ರಧಾನ ಮಂತ್ರಿ ಎಂಬ ಅಹಂ ಆವರಿಸಿಕೊಂಡಿದೆ ಹಾಗಾಗಿ ಅವರು ನಮ್ಮ ಪತ್ರಗಳಿಗೆ ಇದುವರೆಗೂ ಉತ್ತರಿಸಿಲ್ಲ ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಅಟ್ಪಾಡಿ ತೆಹ್ಸಿಲ್‌ನಲ್ಲಿ ಶನಿವಾರದಂದು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಹಝಾರೆ, ನಾನು ಕಳೆದ ಮೂರು ವರ್ಷಗಳಲ್ಲಿ ಪ್ರಧಾನಿ ಮೋದಿಗೆ ಸುಮಾರು ಮೂವತ್ತು ಪತ್ರಗಳನ್ನು ಬರೆದಿದ್ದೇನೆ. ಆದರೆ ಅವರು ಅವುಗಳಿಗೆಂದೂ ಉತ್ತರ ನೀಡಿಲ್ಲ. ಅವರಿಗೆ ತಾವು ಪ್ರಧಾನಿ ಎಂಬ ಅಹಂ ಇದೆ. ಹಾಗಾಗಿ ಅವರು ನನ್ನ ಪತ್ರಗಳಿಗೆ ಉತ್ತರಿಸಿಲ್ಲ ಎಂದು ನುಡಿದರು. ಮಾರ್ಚ್ 23ರಿಂದ ಹೊಸದಿಲ್ಲಿಯಲ್ಲಿ ಎರಡನೇ ಸುತ್ತಿನ ಸತ್ಯಾಗ್ರಹವನ್ನು ನಡೆಸುವುದಾಗಿ ಹಝಾರೆ ಈ ಹಿಂದೆ ಘೋಷಿಸಿದ್ದರು. ಅಂದಿನ ಸತ್ಯಾಗ್ರಹಕ್ಕೆ ಬೆಂಬಲವನ್ನು ಕೋರಿ ಹಝಾರೆಯವರು ನಡೆಸುತ್ತಿರುವ ಮೂರು ಸಾರ್ವಜನಿಕ ಸಭೆಗಳ ಪೈಕಿ ಅಟ್ಪಾಡಿಯಲ್ಲಿ ನಡೆದ ಸಭೆ ಮೊದಲನೆಯದಾಗಿದೆ.

ಇದೊಂದು ಹಿಂದೆಂದೂ ಕಂಡುಕೇಳರಿಯದ ಸತ್ಯಾಗ್ರಹವಾಗಲಿದ್ದು ಸರಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ. ಈ ಸಭೆ ಮತ್ತು ಸತ್ಯಾಗ್ರಹಗಳ ಮೂಲಕ ಮತಗಳನ್ನು ಪಡೆಯುವ ಯಾವುದೇ ಇರಾದೆಯು ನನಗಿಲ್ಲ. ಜನಲೋಕಪಾಲ್‌ಗಾಗಿ ನಡೆಸಿದಂಥ ಬೃಹತ್ ಸತ್ಯಾಗ್ರಹದ ಮಾದರಿಯಲ್ಲೇ ರೈತರ ಬಗೆಗಿನ ಸತ್ಯಾಗ್ರಹವೂ ಇರಲಿದೆ ಎಂದು ಹಝಾರೆ ತಿಳಿಸಿದ್ದಾರೆ.

ಈ ಬಾರಿಯ ಸತ್ಯಾಗ್ರಹದಲ್ಲಿ ಲೋಕಪಾಲ್ ಅನುಷ್ಟಾನ, ಲೋಕಾಯುಕ್ತರ ನೇಮಕ, ರೈತರಿಗೆ 5,000 ರೂ. ಪಿಂಚಣಿ ಮತ್ತು ರೈತರ ಬೆಳೆಗಳಿಗೆ ಹೆಚ್ಚಿನ ದರ ನಿಗದಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಸರಕಾರದ ಮುಂದೆ ಇಡಲಾಗುವುದು ಎಂದು ಹಝಾರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News