ಗಡಿಯನ್ನು ದಾಟಲು ಹಿಂಜರಿಯುವುದಿಲ್ಲ ಎಂಬುದನ್ನು ಭಾರತ ತೋರಿಸಿದೆ: ರಾಜನಾಥ್ ಸಿಂಗ್

Update: 2018-01-21 16:29 GMT

ಲಕ್ನೊ, ಜ.21: ಅಗತ್ಯ ಬಿದ್ದರೆ ಕೇವಲ ತನ್ನ ಭೂಮಿಯ ಮೇಲೆ ಮಾತ್ರವಲ್ಲ ವಿದೇಶಿ ಭೂಮಿಯನ್ನೂ ಪ್ರವೇಶಿಸಿ ಶತ್ರುಗಳ ಮೇಲೆ ದಾಳಿ ನಡೆಸಲು ಸಿದ್ಧ ಎಂಬುದನ್ನು ಭಾರತವು ತೋರಿಸಿಕೊಟ್ಟಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರವಿವಾರ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಭಾರತೀಯ ಸೇನೆಯು ಏಳು ಪಾಕಿಸ್ತಾನಿ ಸೈನಿಕರನ್ನು ಹತ್ಯೆಗೈದು ನಾಲ್ವರನ್ನು ಗಂಭೀರವಾಗಿ ಗಾಯಗೊಳಿಸಿದ ಒಂದು ವಾರಗಳ ನಂತರ ಸಿಂಗ್ ಈ ಹೇಳಿಕೆಯನ್ನು ನೀಡಿದ್ದಾರೆ.

ಕೆಲವು ತಿಂಗಳ ಹಿಂದೆ ಪಾಕಿಸ್ತಾನವು ಹೇಡಿಯಂತೆ ವರ್ತಿಸಿ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದ ಪರಿಣಾಮ ನಮ್ಮ ಹದಿನೇಳು ಯೋಧರು ಹುತಾತ್ಮರಾದರು. ಈ ಗಂಭೀರ ವಿಷಯದ ಬಗ್ಗೆ ಪ್ರಧಾನಿ ಮೋದಿಯವರು ನಮ್ಮ ಜೊತೆ ಚರ್ಚಿಸಿದ ನಂತರ ಭಾರತೀಯ ಸೇನೆ ಪಾಕಿಸ್ತಾನ ಭೂಭಾಗವನ್ನು ಪ್ರವೇಶಿಸಿ ಹಲವು ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿತು ಎಂದು ಸಿಂಗ್ ವಿವರಿಸಿದ್ದಾರೆ.

ಜಗತ್ತಿನ ಮುಂದೆ ಭಾರತವು ಒಂದು ಬಲಿಷ್ಠ ರಾಷ್ಟ್ರ ಎಂದು ಬಿಂಬಿತವಾಗಿದೆ ಮತ್ತು ನಾವು ಕೇವಲ ನಮ್ಮ ನೆಲದ ಮೇಲೆ ಮಾತ್ರವಲ್ಲ ವಿದೇಶಿ ನೆಲದಲ್ಲೂ ಶತ್ರುಗಳ ಮೇಲೆ ದಾಳಿ ನಡೆಸಬಲ್ಲೆವು ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ರವಾನಿಸಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.

ಭಾರತವು ತನ್ನ ಪಕ್ಕದ ರಾಷ್ಟ್ರದ ಜೊತೆ ಸ್ನೇಹ ಸಂಬಂಧವನ್ನು ಹೊಂದಲು ಬಯಸುತ್ತದೆ. ಆದರೆ ಪಾಕಿಸ್ತಾನ ತನ್ನ ವರ್ತನೆಯನ್ನು ಸರಿಪಡಿಸುತ್ತಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News