‘ಆಪ್’ ಶಾಸಕರ ಅನರ್ಹತೆ ತುಘಲಕ್‌ಶಾಹಿ ಕ್ರಮ : ಯಶವಂತ್ ಸಿನ್ಹ ಟೀಕೆ

Update: 2018-01-21 16:45 GMT

ಹೊಸದಿಲ್ಲಿ, ಜ.21: ಪಕ್ಷದ ಕಾರ್ಯನೀತಿಗಳ ಬಗ್ಗೆ ಸದಾ ಟೀಕಾಸ್ತ್ರ ಎಸೆಯುತ್ತಿರುವ ಬಿಜೆಪಿಯ ಹಿರಿಯ ಮುಖಂಡ ಯಶವಂತ್ ಸಿನ್ಹ, ‘ಆಪ್’ ಶಾಸಕರ ಅನರ್ಹತೆಯ ಕುರಿತೂ ತಮ್ಮ ಅಸಮಾಧಾನವನ್ನು ಹೊರಗೆಡವಿದ್ದಾರೆ. ಈ ಕ್ರಮ ತುಘಲಕ್‌ಶಾಹಿ (ಸ್ವೇಚ್ಛಾಚಾರದ )ಕ್ರಮವಾಗಿದೆ ಎಂದು ಟೀಕಿಸಿದ್ದಾರೆ. 20 ಆಪ್ ಶಾಸಕರನ್ನು ಅನರ್ಹಗೊಳಿಸುವ ಶಿಫಾರಸ್ಸಿಗೆ ರಾಷ್ಟ್ರಪತಿಯವರು ಅಂಕಿತ ಹಾಕಿರುವುದು ಸಾಮಾನ್ಯ ನ್ಯಾಯದ ವಿಫಲತೆಯಾಗಿದೆ. ಹೇಳಿಕೆಯನ್ನು ಆಲಿಸಲಾಗಿಲ್ಲ, ಅಥವಾ ಹೈಕೋರ್ಟ್ ಆದೇಶದವರೆಗೆ ಕಾಯಲೂ ಆಗಲಿಲ್ಲ . ಇದು ತುಘಲಕ್‌ಶಾಹಿ ಆದೇಶ ಎಂದು ಸಿನ್ಹ ಹೇಳಿದರು.

ಶಾಸಕರ ಅನರ್ಹತೆ ರಾಜಕೀಯ ಪ್ರೇರಿತ ಕ್ರಮವಾಗಿದ್ದು ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆಪ್ ಟೀಕಿಸಿದೆ. ಈ ಮಧ್ಯೆ ಹೇಳಿಕೆ ನೀಡಿರುವ ಆಪ್ ಮುಖಂಡ ಅರವಿಂದ್ ಕೇಜ್ರೀವಾಲ್, ಅವರು ನಮಗೆ ಪದೇ ಪದೇ ಕಿರುಕುಳ ನೀಡಲು ಪ್ರಯತ್ನಿಸಿದರು. ನಮ್ಮ ಶಾಸಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿದರು. ನನ್ನನ್ನು ಗುರಿಯಾಗಿಸಿಕೊಂಡು ಸಿಬಿಐ ದಾಳಿ ಕೂಡಾ ನಡೆಸಿದರು. ಈಗ ಅಂತಿಮವಾಗಿ ನಮ್ಮ 20 ಶಾಸಕರನ್ನು ಅನರ್ಹಗೊಳಿಸಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿಯನ್ನು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News