ಮಂಗಳೂರಲ್ಲಿ ಕೆಲಸ ಮಾಡಿದ ಮುಸ್ಲಿಂ ಜಿಲ್ಲಾಧಿಕಾರಿಗಳೆಷ್ಟು ?

Update: 2018-01-21 18:07 GMT

ಮಂಗಳೂರು, ಜ. 21: ಜಿಲ್ಲಾಧಿಕಾರಿ ಕಚೇರಿ ಸ್ಥಾಪನೆಯಾಗಿ 219 ವರ್ಷಗಳು ಸಂದವು. 1799 ರಿಂದ 1947 ರ ತನಕ 80 ಜಿಲ್ಲಾಧಿಕಾರಿಗಳು / ಕಲೆಕ್ಟರರು ಬ್ರಿಟಿಷ್ ಆಡಳಿತ ವ್ಯವಸ್ಥೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 

1799 ರಿಂದ 1857 ರ ತನಕ ಈಸ್ಟ್ ಇಂಡಿಯಾ ಕಂಪೆನಿ ಹಾಗೂ 1857 ರಿಂದ 1947 ರ ತನಕ ನೇರವಾಗಿ ಬ್ರಿಟಿಷ್ ಸಾಮ್ರಾಜ್ಯದ ಅಡಿ ಮದ್ರಾಸ್ ಪ್ರಾಂತ್ಯದಲ್ಲಿ ಸೌತ್ ಕೆನರಾ ಕಲೆಕ್ಟರರಾಗಿ 80 ಮಂದಿ ಕೆಲಸ ಮಾಡಿದ್ದಾರೆ. 1947 ರ ಸ್ವಾತಂತ್ರ್ಯ ನಂತರ ಈ ತನಕ 48 ಜಿಲ್ಲಾಧಿಕಾರಿಗಳು ಹೀಗೇ ಸ್ವಾತಂತ್ರ್ಯ ಪೂರ್ವ ಹಾಗೂ ನಂತರ ಒಟ್ಟು 128 ಜಿಲ್ಲಾಧಿಕಾರಿಗಳು ಅಥವಾ ಕಲೆಕ್ಟರರನ್ನು ನಮ್ಮ ಜಿಲ್ಲೆ ಕಂಡಿದೆ.

ನಮ್ಮ ಜಿಲ್ಲೆಯ ಮೊದಲ ಜಿಲ್ಲಾಧಿಕಾರಿಯಾಗಿ ಮೇಜರ್ ಮುನ್ರೋ ಅವರು 1799ರಲ್ಲಿ ಅಧಿಕಾರ ವಹಿಸಿಕೊಂಡರು. ಅಂದಿನಿಂದ ಇಂದಿನ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ತನಕ ಜಿಲ್ಲೆ ಕಂಡ 128 ಜಿಲ್ಲಾಧಿಕಾರಿಗಳಲ್ಲಿ ಮುಸ್ಲಿಂ ಜಿಲ್ಲಾಧಿಕಾರಿಗಳು ಎಷ್ಟು ಮಂದಿ ಬಂದು ಹೋಗಿದ್ದಾರೆ ಗೊತ್ತಾ ?

ಹಿಂದಿನ ಕಾಲದಲ್ಲಿ ಮುಸ್ಲಿಮರಲ್ಲಿ ಶಿಕ್ಷಣ ಕಮ್ಮಿ ಎಂದು ಹೇಳೋರೇ ಅಧಿಕ. ಆದರೆ ಮುಸ್ಲಿಮರೂ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದರು ಅನ್ನುವುದು ಗತಕಾಲದ ಸಂಗತಿಯಿಂದ ವೇದ್ಯವಾಗುತ್ತದೆ. ಮುಸ್ಲಿಂ ಜಿಲ್ಲಾಧಿಕಾರಿ ಅಂತ ಹೇಳುವಾಗ ನೆನಪಾಗುವುದು ಎ.ಬಿ. ಇಬ್ರಾಹೀಂ. ಸ್ವಲ್ಪ ಹಿರಿ ತಲೆಮಾರಲ್ಲಿ ಕೇಳಿದ್ರೆ ಪಿ.ಎಂ. ಮುಜಾಹಿದ್ ಅಥವಾ ಅರಕ್ಕಲ್ ಕುಂಞಿ ಅಹ್ಮದ್ ಅವರ ನೆನಪಿರಬಹುದೇನೋ. ಆದರೆ ದ.ಕ.ಜಿಲ್ಲೆಯ 128 ಜಿಲ್ಲಾಧಿಕಾರಿಗಳಲ್ಲಿ ಈ ತನಕ ಒಟ್ಟು 9 ಮಂದಿ ಮುಸ್ಲಿಂ ಜಿಲ್ಲಾಧಿಕಾರಿಗಳು ಕೆಲಸ ಮಾಡಿದ್ದಾರೆ ಅನ್ನುವುದು ಬಹುತೇಕ ಜನರಿಗೆ ಗೊತ್ತಿಲ್ಲ.

ನಾಲ್ಕೈದು ದಿನಗಳ ಹಿಂದೆ ಒಂದು ವಿಷಯಕ್ಕಾಗಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಫೋನ್ ಮಾಡಿದ್ದೆ. ಮರುದಿನ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿಗೆ ಬರಲು ಹೇಳಿದ್ದರು. ಹೇಳಿದ ಸಮಯಕ್ಕಿಂತ ಅರ್ಧ ಗಂಟೆ ಮುಂಚೆಯೇ ತಲುಪಿದ್ದೆ. ಜಿಲ್ಲಾಧಿಕಾರಿ ಕಟ್ಟಡದ ಎರಡನೇ ಮಹಡಿಯಲ್ಲಿ ಅವರ ಕಚೇರಿಯಿದೆ. ಸಮಯ ಇದ್ದುದರಿಂದ ಆ ಅಂತಸ್ತಿನ ತುಂಬಾ ಕಣ್ಣಾಡಿಸಿದಾಗ ಅಲ್ಲಿ ಎಲ್ಲಾ 128 ಜಿಲ್ಲಾಧಿಕಾರಿಗಳ ವಿವರಗಳನ್ನು ದಾಖಲಿಸಲಾಗಿತ್ತು. ಜತೆಗೆ ಕರಾವಳಿಯ ಕಲೆ, ಸಂಸ್ಕೃತಿ, ಉದ್ಯಮ, ಧಾರ್ಮಿಕ ವೈಭವಗಳನ್ನು ಪ್ರತಿಬಿಂಬಿಸುವ ಚಿತ್ರಗಳನ್ನು ಅಳವಡಿಸಲಾಗಿತ್ತು. ಆ ಅಂತಸ್ತು ತುಂಬಾ ಮೈನವಿರೇಳಿಸುವ ಚಿತ್ರಪಟಗಳಿದ್ದವು.

ಸ್ವಾತಂತ್ರ್ಯ ಪೂರ್ವ 47ನೆ ಸೌತ್ ಕೆನರಾ ಜಿಲ್ಲಾಧಿಕಾರಿಯಾಗಿ ಅಝೀಝುದ್ದೀನ್ ಹುಸೇನ್ ಸಾಹೇಬ್ ಬಹದ್ದೂರ್ (1904-05), 65ನೆ ಜಿಲ್ಲಾಧಿಕಾರಿಯಾಗಿ ಜೆ. ಹುಸೈನ್ (1928-31), 67ನೆ ಜಿಲ್ಲಾಧಿಕಾರಿಯಾಗಿ ಎಂ.ಡಿ. ಹುಮಾಯೂನ್ ಸಾಹೇಬ್ ಬಹದ್ದೂರ್ (1935), 70ನೆ ಜಿಲ್ಲಾಧಿಕಾರಿಯಾಗಿ ಖಾನ್ ಬಹದ್ದೂರ್ ಶರೀಫ್ ಅಹ್ಮದಾಲಿ ಸಾಹೇಬ್ ಬಹದ್ದೂರ್ (1939), 75ನೆ ಕಲೆಕ್ಟರರಾಗಿ ಎಂ. ಕರ್ಮತುಲ್ಲಾ (1942) ಕಾರ್ಯನಿರ್ವಹಿಸಿದ್ದರು.

ಸ್ವಾತಂತ್ರ್ಯ ನಂತರ 83ನೆ ಜಿಲ್ಲಾಧಿಕಾರಿಯಾಗಿ ಸೈಯದ್ ಅಹ್ಮದ್ ಸಾಹೇಬ್ (1949-50), 89ನೆ ಜಿಲ್ಲಾಧಿಕಾರಿ ಅರಕ್ಕಲ್ ಕುಂಞಿ ಅಹ್ಮದ್ (1954-55), 94ನೆ  ಜಿಲ್ಲಾಧಿಕಾರಿಯಾಗಿ ಪಿ.ಎಂ. ಮುಜಾಹಿದ್ (1964-65) ಹಾಗೂ 126ನೆ ಜಿಲ್ಲಾಧಿಕಾರಿಯಾಗಿ ಎ.ಬಿ. ಇಬ್ರಾಹೀಂ (2013-16) ಕೆಲಸ ಮಾಡಿದ್ದು ತಿಳಿದುಬರುತ್ತದೆ.

ಜಿಲ್ಲಾಧಿಕಾರಿಯಂತಹ ದೊಡ್ಡ ಹುದ್ದೆಯಲ್ಲೂ ಕರಾವಳಿಯಲ್ಲಿ ಕೆಲಸ ಮಾಡಿದ ಈ ಹಿರಿಯರಲ್ಲದೆ ಎಲ್ಲಾ 128 ಜನರ ವಿವರವನ್ನು ಶೇಖರಿಸಿಟ್ಟು ಸಾರ್ವಜನಿಕವಾಗಿ ಪ್ರದರ್ಶಿಸಿರುವುದು ಸ್ತುತ್ಯರ್ಹ.
- ರಶೀದ್ ವಿಟ್ಲ

Writer - ರಶೀದ್ ವಿಟ್ಲ.

contributor

Editor - ರಶೀದ್ ವಿಟ್ಲ.

contributor

Similar News