ಮಂಗಳೂರಿನಲ್ಲಿ ಮತ್ತೊಂದು ಮರ್ಡರ್

Update: 2018-01-22 14:22 GMT
ಹತ್ಯೆಗೀಡಾದ ಶಿವರಾಜ್

 ಮಂಗಳೂರು, ಜ. 22: ದುಷ್ಕರ್ಮಿಗಳ ತಂಡವೊಂದು ವ್ಯಕ್ತಿಯೋರ್ವನನ್ನು ಮಾರಕಾಸಗಳಿಂದ ಕೊಚ್ಚಿ ಕೊಲೆಗೈದ ಘಟನೆ ನಗರದ ಹೊರವಲಯದ ತಣ್ಣೀರುಬಾವಿ ಸಮೀಪದ ಬೊಕ್ಕಪಟ್ಣ ಬೆಂಗ್ರೆ ಎಂಬಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಕೊಲೆಗೀಡಾದವರನ್ನು ಬೆಂಗ್ರೆಯ ಬೊಕ್ಕಪಟ್ಣ ನಿವಾಸಿ ಕರುಣಾಕರ ಎಂಬವರ ಪುತ್ರ ಶಿವರಾಜ್(45) ಎಂದು ಗುರುತಿಸಲಾಗಿದೆ.

ಬೊಕ್ಕಪಟ್ಣ ದ ತನ್ನ ಮನೆಯ ಟೆರೇಸ್ ಮೇಲೆ ಮಲಗಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳ ತಂಡ ಈ ಕೃತ್ಯ ಎಸಗಿದೆ. ಶಿವರಾಜ್‌ನ ಸಹೋದರ ಭರತೇಶ್ ಎಂಬಾತ ಮೆಂಡನ್ ಗ್ಯಾಂಗ್‌ನ ಸದಸ್ಯನಾಗಿದ್ದು, ರೌಡಿ ಶೀಟರ್ ಆಗಿದ್ದಾನೆ. ಇವರಿಬ್ಬರೂ ಟೆರೇಸ್ ಮೇಲೆ ಮಲಗುತ್ತಿದ್ದರು ಎನ್ನಲಾಗಿದ್ದು, ರವಿವಾರ ರಾತ್ರಿ ಶಿವರಾಜ್ ಮಾತ್ರ ಮಲಗಿದ್ದ. ಸೋಮವಾರ ಮುಂಜಾನೆ ಸುಮಾರು 4.30ರ ಹೊತ್ತಿಗೆ ಮೂವರ ತಂಡವೊಂದು ಶಿವರಾಜ್‌ರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪರಾರಿಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವರಾಜ್‌ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅದಾಗಲೇ ಮೃತಪಟ್ಟಿದ್ದರು. ಭರತೇಶ್ ನಿತ್ಯ ಟೆರೇಸ್‌ನ ಮೇಲೆ ಮಲಗುತ್ತಿದ್ದ ಎಂದು ಹೇಳಲಾಗಿದ್ದು, ದುಷ್ಕಮಿಗಳ ತಂಡ ಭರತೇಶ್‌ನನ್ನು ಹತ್ಯೆ ಮಾಡಲು ಬಂದು ಶಿವರಾಜ್‌ರನ್ನು ಹತ್ಯೆ ಮಾಡಿರಬೇಕೆಂಬ ಶಂಕೆ ವ್ಯಕ್ತವಾಗಿದೆ.

ಘಟನೆಯ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ವೈಯಕ್ತಿಕ ದ್ವೇಷ ಶಂಕೆ

ಕಮಿಷನರ್‌ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಅವರು ವೈಯಕ್ತಿಕ ದ್ವೇಷದಿಂದ ಈ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ಉಳಿದ ಆರೋಪಿಗಳ ಸುಳಿವು ಲಭ್ಯವಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ ಎಂದು ಹೇಳಿದರು.

ಶಿವರಾಜ್ ಹತ್ಯೆ ಗ್ಯಾಂಗ್‌ವಾರ್‌ನಿಂದ ನಡೆದಿಲ್ಲ. ಶಿವರಾಜ್ ಸಂಬಂಧಿಕರೊಬ್ಬರು ಬೊಕ್ಕಪಟ್ಣದಲ್ಲಿ ವಾಸವಿದ್ದು, ತಿಂಗಳ ಹಿಂದೆ ಇವರಿಬ್ಬರ ನಡುವೆ ಜಗಳ ನಡೆದಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವೈಯಕ್ತಿಕ ದ್ವೇಷದಿಂದ ಕೊಲೆ ನಡೆದಿದೆಯೇ ಎಂಬ ನಿಟ್ಟಿನಲ್ಲಿಯೂ ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News