ದ.ಕ.ದಲ್ಲಿ ಫೆಬ್ರವರಿಯಲ್ಲಿ ಜೆಡಿಎಸ್‌ನಿಂದ ಶಾಂತಿಗಾಗಿ ಜಾಥಾ: ದೇವೇಗೌಡ

Update: 2018-01-22 12:28 GMT

ಮಂಗಳೂರು, ಜ.22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ತಿಂಗಳುಗಳಿಂದೀಚೆಗೆ ನಡೆದಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಸಾಮರಸ್ಯಕ್ಕಾಗಿ ನಡಿಗೆ (ರ್ಯಾಲಿ)ಯನ್ನು ಫೆಬ್ರವರಿ ಎರಡನೆ ವಾರದಲ್ಲಿ ನಡೆಸಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ.

ಮಂಗಳೂರಿಗೆ ನಿನ್ನೆ ಆಗಮಿಸಿರುವ ಅವರು ಇಂದು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ಹಿಂದೆ ಜೆಡಿಎಸ್ ವತಿಯಿಂದ ರ್ಯಾಲಿ ನಡೆಸಲು ಮುಂದಾದಾಗ ನಗರದಲ್ಲಿ ಸೆಕ್ಷನ್ ಹಾಕಲಾಗಿತ್ತು. ಹಾಗಾಗಿ ರ್ಯಾಲಿಯನ್ನು ಮುಂದೂಡಬೇಕಾಯಿತು. ಪಕ್ಷಾತೀತವಾಗಿ, ಧರ್ಮಗುರುಗಳ ಉಪಸ್ಥಿತಿಯಲ್ಲಿ ನಗರದ ಮಹಾತ್ಮ ಗಾಂಧಿ ವೃತ್ತದಿಂದ ನೆಹರೂ ಮೈದಾನವರೆಗೆ ಸುಮಾರು 2 ಕಿ.ಮೀ.ನ ರ್ಯಾಲಿಯನ್ನು ನಡೆಸಲು ಉದ್ದೇಶಿಸಲಾಗಿದೆ ಎಂದವರು ಹೇಳಿದರು.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷ ಅಷ್ಟೊಂದು ಪ್ರಬಲವಾಗಿಲ್ಲ. ಆದರೆ ಬಲಿಷ್ಠಗೊಳಿಸಲು ಪ್ರಯತ್ನ ಮಾಡಲಾಗುತ್ತಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಜೆಡಿಎಸ್‌ನ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಕೆಲವೊಂದು ಕಡೆ ಎಡ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಂಡು ಸ್ಥಾನ ಬಿಟ್ಟುಕೊಡಲು ಸಿದ್ಧ ಎಂದು ದೇವೇಗೌಡ ಹೇಳಿದರು.

ಪ್ರಧಾನಿ ಮೋದಿ ಬುದ್ಧಿವಂತರಾಗಿರಬಹುದು, ಆದರೆ ಮಾತನಾಡುವುದಿಲ್ಲ!

ಮಹಾದಾಯಿ ಸಮಸ್ಯೆಯನ್ನು ಇತ್ಯರ್ಥಗೊಳಿಸುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಬಳಿಗೆ ಹೋಗಿದ್ದೆ. 1996ರಲ್ಲಿ ಮಹಾದಾಯಿ ಪ್ರಕರಣಕ್ಕೆ ಸಂಬಂಧಿಸಿ ದೊರಕಿರುವ ಆದೇಶದ ಪ್ರತಿ ಅವರ ಮುಂದಿರಿಸಿ ಸಮಸ್ಯೆಗೆ ಪರಿಹಾರ ನೀಡಿ ಎಂದು ಮನವಿ ಮಾಡಿದೆ. ಆದರೆ ನಾನು ಎಷ್ಟೇ ಮಾತನಾಡಿದರೂ ಅವರು ವೌನವಾಗಿದ್ದರು ಎಂದು ದೇವೇಗೌಡ ಹೇಳಿದರು.

ಕಾಂಗ್ರೆಸ್‌ಗೆ ಬೆಂಬಲ ನೀಡಿ ಬೆರಳು ಸುಟ್ಟುಕೊಂಡಿದ್ದೇನೆ!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುವಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಇರಾದೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, 2004ರಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿ ಬೆರಳು ಸುಟ್ಟುಕೊಂಡಿದ್ದೇನೆ ಎಂದು ಹೇಳುವ ಮೂಲಕ ಮಾಜಿ ಪ್ರಧಾನಿ ದೇವೇಗೌಡರು ಮುಂದಿನ ಚುನಾವಣೆಯಲ್ಲಿ ಮೈತ್ರಿಯ ಪ್ರಸ್ತಾಪವನ್ನು ತಳ್ಳಿ ಹಾಕಿದರು.

ಫೆಬ್ರವರಿ ಅಂತ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಪೂರ್ಣ
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಫೆಬ್ರವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಕೆಲವು ಕಡೆ ಕಮ್ಯೂನಿಸ್ಟ್ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಅವರಿಗೆ ಸೀಟು ಬಿಟ್ಟುಕೊಡಲಾಗುವುದು ಎಂದರು.
ಈ ಬಾರಿ ಎಸ್‌ಡಿಪಿಐ ಜೊತೆ ಸೇರಿ ಚುನಾವಣೆ ಎದುರಿಸುವ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ಯಾವತ್ತೂ ಅಧಿಕಾರ ಮುಖ್ಯ ಅಲ್ಲ, ಸಿದ್ಧಾಂತ ಮುಖ್ಯ. ಜೆಡಿಎಸ್ ತನ್ನ ತತ್ವ ಸಿದ್ಧಾಂತಗಳನ್ನು ಎಂದೂ ಬಿಟ್ಟು ಕೊಡುವುದಿಲ್ಲ. ನನ್ನ ಮಾತು ಮೀರಿ 2006ರಲ್ಲಿ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಕೈ ಕೈಜೋಡಿಸಿದಕ್ಕಾಗಿ ಈಗಲೂ ಪಶ್ಚಾತ್ತಾಪ ಪಡುತ್ತಿದ್ದಾರೆ. ಈ ಬಾರಿ ಜೆಡಿಎಸ್ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದ್ದು, ಕಾವೇರಿ ಸಮಸ್ಯೆ, ಮಹಾದಾಯಿ ವಿಚಾರ, ರೈತರ ಸಮಸ್ಯೆಯಂತಹ ಜ್ವಲಂತ ಸಮಸ್ಯೆಗಳನ್ನೇ ಮುಂದಿಟ್ಟುಕ್ಕೊಂಡು ಜನರ ಬಳಿ ಹೋಗುತ್ತೇವೆ ಎಂದವರು ಹೇಳಿದರು.

ಮತೀಯ ಹಿಂಸೆಗಳಿಗೆ ಅವಕಾಶ ನೀಡಲಾಗದು

ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಜಿಲ್ಲೆಯಲ್ಲಿ ಮಾತ್ರವಲ್ಲದೆ, ರಾಜ್ಯದಲ್ಲಿ ಮತೀಯ ಹಿಂಸೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಪಕ್ಷದ ಪ್ರಣಾಳಿಕೆಯಲ್ಲಿ ಪಕ್ಷದ ಭರವಸೆಗಳನ್ನು ತಿಳಿಸುವುದಾಗಿ ಹೇಳಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಶಕ್ತಿ ಕುಂದಿದೆ ಎಂಬುದು ಅವರ ಹೇಳಿಕೆಗಳಿಂದಲೇ ಸ್ಪಷ್ಟವಾಗುತ್ತಿದೆ. ಈ ಹಿಂದಿನಂತೆ ಬಹುಮತದೊಂದಿಗೆ ಗೆದ್ದು ಅಧಿಕಾರ ನಡೆಸುತ್ತೇನೆ ಎಂಬ ರೋಷ ಈಗ ಅವರಲ್ಲಿಲ್ಲ. ಕಾಂಗ್ರೆಸ್ ಶಕ್ತಿ ಕುಂದುತ್ತಿರುವುದು ಅವರಿಗೂ ಮನವರಿಕೆಯಾಗಿದೆ. ಪ್ರತಿ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿಯಿದೆ. ಕರಾವಳಿಯಲ್ಲೂ ಈ ಹಿಂದೆ ನಾವು ಗೆಲುವು ಸಾಧಿಸಿದ್ದೆವು. ಈ ಬಾರಿಯೂ ಗೆಲುವಿಗೆ ವಿಶೇಷ ಒತ್ತು ನೀಡಿದ್ದೇವೆ ಎಂದು ದೇವೇಗೌಡ ಹೇಳಿದರು.

ದತ್ತಾರನ್ನು ಕಡೆಗಣಿಸಲಾಗಿಲ್ಲ

ಜೆಡಿಎಸ್‌ನ ವಕ್ತಾರ ವೈವಿಎಸ್ ದತ್ತಾರನ್ನು ಪಕ್ಷ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರು ಆತ್ಮಚರಿತ್ರೆ ಬರೆಯುತ್ತಿದ್ದಾರೆ. ಚುನಾವಣೆಯ ಸಂದರ್ಭ ಅವರು ಸಕ್ರಿಯವಾಗಿ ರಾಜಕೀಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರವೂಫ್ ಪುತ್ತಿಗೆ, ಯುವ ಜೆಡಿಎಸ್ ಅಧ್ಯಕ್ಷ ರಮೇಶ್ ಗೌಡ, ಜಿಲ್ಲಾ ಅಧ್ಯಕ್ಷ ಮುಹಮ್ಮದ್ ಕುಂಞಿ, ಎಂ.ಬಿ. ಸದಾಶಿವ, ಅಕ್ಷಿತ್ ಸುವರ್ಣ , ರಮೀಝಾ, ವಸಂತ ಪೂಜಾರಿ, ಎಂ.ಕೆ.ಖಾದರ್, ಹೈದರ್ ಪರ್ತಿಪ್ಪಾಡಿ, ಮುಲ್ಕಿ ನೂರ್ ಮುಹಮ್ಮದ್, ಇಕ್ಬಾಲ್ ಮುಲ್ಕಿ, ಸುಮತಿ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News