ಬಂಟ್ವಾಳವನ್ನು ಪರಿವರ್ತನೆಗೊಳಿಸುವ ಮೊದಲು ಬಿಜೆಪಿ ಸ್ವಪರಿವರ್ತನೆಯಾಗಲಿ: ಎಂ.ಎಸ್.ಮುಹಮ್ಮದ್

Update: 2018-01-22 12:34 GMT

ಬಂಟ್ವಾಳ, ಜ. 22: ಬಂಟ್ವಾಳವನ್ನು ಪರಿವರ್ತನೆಗೊಳಿಸುವ ಮೊದಲು ಬಿಜೆಪಿಯವರು ಸ್ವಪರಿವರ್ತನೆಯಾಗಬೇಕಾದ ಅವಶ್ಯಕತೆಯಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್.ಮುಹಮ್ಮದ್ ಹೇಳಿದ್ದಾರೆ.

ಅವರು ಸೋಮವಾರ ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವಹಿಸಿಕೊಂಡಿರುವ ವೇಣುಗೋಪಾಲ್ ಮಾಡಿದ ಪಟ್ಟಿಯಲ್ಲಿ ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲುತ್ತದೆ, ಅದರಲ್ಲಿಯೂ ರಮಾನಾಥ ರೈ ಪ್ರತಿನಿಧಿಸುವ ಬಂಟ್ವಾಳ ಕ್ಷೇತ್ರದಲ್ಲಿ ಹೀನಾಯವಾಗಿ ಸೋಲುತ್ತದೆ ಎಂದು ಎಚ್ಚರಿಸಿದ್ದಾರೆ ಎನ್ನುವ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ತೀರಾ ಬಾಲಿಶವಾಗಿದ್ದು, ಆ ಪಟ್ಟಿ ಸಂಸದರ ಕೈಗಾದರೂ ಹೇಗೆ ಸಿಕ್ಕಿದೆ. ಯಾರೂ ಸಹ ರಕ್ತಾಕ್ಷರಗಳಲ್ಲಿ ಬರೆದುಕೊಳ್ಳುವ ಅವಶ್ಯಕತೆಯಿಲ್ಲ ಎಂದ ಅವರು, ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಮ್ಮೆ ರಮಾನಾಥ ರೈಯವರೇ ಅಭೂತಪೂರ್ವ ಗೆಲುವು ಸಾಧಿಸುವುದು ಶತಸಿದ್ಧ ಎಂದು ಬಿಜೆಪಿ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದರು.

ರೈವರು ಶಾಸಕರಾಗಿ, ಸಚಿವರಾಗಿ ಮಾಡಿರುವ ಕ್ಷೇತ್ರಾಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಅವರಿಗೆ ಕನಿಷ್ಠ ಮಾಹಿತಿಯೇ ಇಲ್ಲ. ಕರೋಪಾಡಿ, ಕನ್ಯಾನ, ಕೊಳ್ನಾಡು, ಸಾಲೆತ್ತೂರು, ವಿಟ್ಲಪಡ್ನೂರು ವ್ಯಾಪ್ತಿಯಲ್ಲಿ 150 ಕೋ. ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆ, ಬಂಟ್ವಾಳದಲ್ಲಿ ಮಿನಿವಿಧಾನಸೌಧ, ಮೆಸ್ಕಾಂ ಕಟ್ಟಡ, ಬಸ್ ನಿಲ್ದಾಣ, ಅಜಿಲಮೊಗ್ರು-ಕಡೇಶಿವಾಲಯ ಸೌಹಾರ್ದ ಸೇತುವೆ, ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ನೂರಾರು ರಸ್ತೆ ಇನ್ನಿತರ ಕೋಟ್ಯಂತರ ವೆಚ್ಚದ ಕಾಮಗಾರಿಗಳು ರೈಯವರ ಸಾಧನೆಯೇ ಹೊರತು, ಬೇರೆ ಯಾರದ್ದೂ ಅಲ್ಲ ಎಂದರು.

ಬಂಟ್ವಾಳ ಕರ್ನಾಟಕದಲ್ಲಿಯೇ ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿದ ವಿಧಾನಸಭಾ ಕ್ಷೇತ್ರ ಎಂಬ ವಿಚಾರ ಬಿಜೆಪಿಯವರಿಗೆ ತಿಳಿದಿರಲಿ. ಕೋಟ ಶ್ರೀನಿವಾಸ ಪೂಜಾರಿ ಅವರು ಸಿದ್ದರಾಮಯ್ಯ ನಿದ್ದೆಯಲ್ಲಿದ್ದಾರೆ ಎಂಬ ಹೇಳಿಕೆ ನೀಡಿದ್ದು, ಮುಖ್ಯಮಂತ್ರಿಯವರ ಅಭಿವೃದ್ಧಿ ಕಾರ್ಯಗಳು ಯಾವುದೆಂದು ತಿಳಿಯದ ಕೋಟ ಶ್ರೀನಿವಾಸ ಪೂಜಾರಿಯವರೇ ಗಾಢನಿದ್ದೆಯಲ್ಲಿದ್ದಾರೆ ಎಂದು ಹೇಳಿದರು.

ಕ್ಷೇತ್ರ ಜನರಿಗೆ ಧೂಳಿನ ಭಾಗ್ಯ ಕಲ್ಪಿಸಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡುತ್ತಿರುವ ರಾಜೇಶ್ ನಾಕ್ ಉಳಿಪ್ಪಾಡಿ ಅವರು, ಮುಂದಿನ ಚುನಾವಣೆಯಲ್ಲಿ ಗೆಲ್ಲುವುದು ತಿರುಕನ ಕನಸಾಗಲಿದೆ ಎಂದು ಭವಿಷ್ಯ ನುಡಿದರು. ಬಂಟ್ವಾಳ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಬಂಟ್ವಾಳ ತಾಲೂಕು ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News