ಪ್ರಧಾನಿಯ ‘ಝೀ ನ್ಯೂಸ್’ ಸಂದರ್ಶನದ ಬಳಿಕ ದೇಶಾದ್ಯಂತ ‘ಪಕೋಡ’ ಸುದ್ದಿಯಾದದ್ದೇಕೆ?

Update: 2018-01-22 14:41 GMT

ಹೊಸದಿಲ್ಲಿ, ಜ.22: ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುವುದಿಲ್ಲ, ಸುದ್ದಿಗೋಷ್ಠಿ ನಡೆಸುವುದಿಲ್ಲ ಎನ್ನುವ ತನ್ನ ಮೇಲಿರುವ ಆರೋಪಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ 2 ಟಿವಿ ಚಾನೆಲ್ ಗಳಿಗೆ ಸಂದರ್ಶನ ನೀಡಿದ್ದಾರೆ.

ಇತ್ತೀಚೆಗೆ 'ಟೈಮ್ಸ್ ನ್ಯೂ ಚಾನೆಲ್'ನ ಸಂದರ್ಶನದಲ್ಲಿ ಮಾತನಾಡಿದ್ದ ಪ್ರಧಾನಿ ಶುಕ್ರವಾರ 'ಝೀ ನ್ಯೂಸ್ ಚಾನೆಲ್' ಸಂದರ್ಶನದಲ್ಲಿ ಕಾಣಿಸಿಕೊಂಡರು. ಸಂದರ್ಶನದಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಆದರೆ ಇವೆಲ್ಲದರ ನಡುವೆ ಗಮನಸೆಳೆದದ್ದು ‘ಪಕೋಡ’. ಸಂದರ್ಶನದಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಪಕೋಡ ಉದಾಹರಣೆ ಮೂಲಕ ಉತ್ತರಿಸಿದ ಪ್ರಧಾನಿ ಇದೀಗ ನಗೆಪಾಟಲಿಗೀಡಾಗಿದ್ದಾರೆ. ಈ ಬಗ್ಗೆ jantakareporter.com ವರದಿ ಪ್ರಕಟಿಸಿದೆ.

ಪ್ರಧಾನ ಮಂತ್ರಿಯಾದ ನಂತರ ಪ್ರತಿವರ್ಷ 1 ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂದು 2013ರಲ್ಲಿ ನೀಡಿದ್ದ ಭರವಸೆಯ ಬಗ್ಗೆ ಸಂದರ್ಶನದಲ್ಲಿ ಪ್ರಶ್ನಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಪ್ರಧಾನಿ, “ಒಂದು ವೇಳೆ ಒಬ್ಬರು ಪಕೋಡ ಮಾರುತ್ತಿದ್ದರೆ, ದಿನದ ಕೊನೆಗೆ 200 ರೂ. ಸಂಪಾದಿಸುತ್ತಿದ್ದರೆ ನೀವದನ್ನು ಉದ್ಯೋಗ ಎಂದು ಕರೆಯುವುದಿಲ್ಲವೇ?, ಝೀ ಟಿವಿ ಕಚೇರಿಯ ಹೊರಗಡೆ ಒಬ್ಬಾತ ಪಕೋಡ ಮಾರಿ ದಿನಂಪ್ರತಿ 200 ರೂ. ಗಳಿಸುವುದಾದರೆ ಅದು ಉದ್ಯೋಗವಲ್ಲವೇ?” ಎಂದು ಪ್ರಶ್ನಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿಯ ಈ ಹೇಳಿಕೆಯ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗಿತ್ತಲ್ಲದೆ ಹಲವರು  “ಉದ್ಯೋಗವೆಂದರೆ ಮೋದಿ ಏನೆಂದು ತಿಳಿದುಕೊಂಡಿದ್ದಾರೆ” ಎಂದು ಪ್ರಶ್ನಿಸಿದ್ದಾರೆ,

ಇನ್ನೂ ಕೆಲವರು ಪ್ರಧಾನಿ ಹೇಳಿಕೆಗೆ ವ್ಯಂಗ್ಯ ಪ್ರತಿಕ್ರಿಯೆಗಳನ್ನೂ ನೀಡಿದ್ದಾರೆ. “ಜನರು ಪಕೋಡಾ ಉದ್ಯಮವನ್ನು ಆರಂಭಿಸಬೇಕು. ತುಂಬಾ ಕಲಿತ ನಂತರ ಸ್ವ-ಉದ್ಯೋಗ”, “ಪಕೋಡ ಅಥವಾ ಇತರ ಸಣ್ಣ ವ್ಯವಹಾರಗಳು 2014ರ ನಂತರ ಆರಂಭವಾದದ್ದಲ್ಲ… 2014ಕ್ಕೂ ಮೊದಲೇ ಇತ್ತು”, “ಎಂತಹ ಕೆಟ್ಟ ಪ್ರಧಾನಿ!. ಯುಪಿಎ ಆಡಳಿತಾವಧಿಯಲ್ಲಿ ನಿರುದ್ಯೋಗದ ಬಗ್ಗೆ ಇವರು ಧ್ವನಿಯೆತ್ತಿದ್ದರು, ಇವರ ಸರಕಾರದ ಆಡಳಿತಾವಧಿಯಲ್ಲಿ ಹಲವರು ಕೆಲಸ ಕಳೆದುಕೊಂಡರು, ಆದರೆ ಈಗ ಅವರನ್ನು ‘ಪಕೋಡಾವಾಲಾ’ಗಳಿಗೆ ಹೋಲಿಸಿದ್ದಾರೆ. ಎಲ್ಲಾ ಭಾರತೀಯರು ಪಕೋಡ ಮಾರಲು ಇವರು ಬಯಸುತ್ತಾರೆಯೇ. ಅವಿದ್ಯಾವಂತ, ಸಂಘಪ್ರಚಾರಕರನ್ನು ಪ್ರಧಾನಿ ಎಂದು ಆರಿಸಿದಾಗ ಹೀಗೆಯೇ ನಡೆಯುತ್ತದೆ”, “ಚಾಯ್ ವಾಲಾಗೆ ಕೇವಲ ಪಕೋಡವಾಲಾ ಬಗ್ಗೆ ಮಾತ್ರ ಕಾಳಜಿಯಿದೆ”….. ಹೀಗೆ ನೂರಾರು ಟ್ವೀಟ್ ಗಳಲ್ಲಿ ಪ್ರಧಾನಿಯನ್ನು ಅಣಕಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News