ಮುಶ್ತಾಕ್ ಅಲಿ ಟ್ರೋಫಿ: ಪಂಜಾಬ್‌ಗೆ ಸತತ ಜಯ

Update: 2018-01-22 18:23 GMT

ಕೋಲ್ಕತಾ, ಜ.22: ಕಲಾತ್ಮಕ ಆಟಗಾರ ಯುವರಾಜ್ ಸಿಂಗ್(40,34 ಎಸೆತ)ಸಾಹಸದ ನೆರವಿನಿಂದ ಪಂಜಾಬ್ ತಂಡ ಮುಶ್ತಾಕ್ ಅಲಿ ಟ್ರೋಫಿ ದೇಶೀಯ ಟ್ವೆಂಟಿ-20 ಪಂದ್ಯಾವಳಿಯಲ್ಲಿ ಮುಂಬೈ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ.

ಈ ಮೂಲಕ ಪಂಜಾಬ್ ಸೂಪರ್ ಲೀಗ್ ಹಂತದಲ್ಲಿ ಸತತ 2ನೇ ಜಯ ದಾಖಲಿಸಿತು. ರವಿವಾರ ಕರ್ನಾಟಕ ವಿರುದ್ಧ ಸೂಪರ್ ಓವರ್‌ನಲ್ಲಿ ರೋಚಕ ಜಯ ಸಾಧಿಸಿತ್ತು.

ಗೆಲ್ಲಲು 199 ರನ್ ಗುರಿ ಪಡೆದಿದ್ದ ಪಂಜಾಬ್ ಒಂದು ಹಂತದಲ್ಲಿ 72 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಆಗ ಎಡಗೈ ಬ್ಯಾಟ್ಸ್‌ಮನ್ ಯುವರಾಜ್(43,18 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ಆರಂಭಿಕ ಆಟಗಾರ ಮನನ್ ವೋರಾ(42,31 ಎಸೆತ, 3 ಬೌಂಡರಿ, 2 ಸಿಕ್ಸರ್) ಪಂಜಾಬ್ ಪಂದ್ಯದ ಮೇಲೆ ಹಿಡಿತ ಸಾಧಿಸಲು ನೆರವಾದರು.

ಯುವರಾಜ್ 8 ಹಾಗೂ 32 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು.ವೋರಾ ಅವರು ಶಿವಂ(3-27)ರಿಗೆ ವಿಕೆಟ್ ಒಪ್ಪಿಸಿದರು. ಆಗ ಗುರುಕೀರತ್ ಸಿಂಗ್‌ರೊಂದಿಗೆ (43 ರನ್) ಕೈಜೋಡಿಸಿದ ಯುವಿ ಪಂಜಾಬ್‌ನ್ನು ಗೆಲುವಿನತ್ತ ಮುನ್ನಡೆಸಿದರು.

ಗುರುಕೀರತ್ ಹಾಗೂ ಯುವಿ ಔಟಾದಾಗ ಶರದ್ ಲಾಂಬಾ (21,10 ಎಸೆತ, 2 ಸಿಕ್ಸರ್, 1 ಬೌಂಡರಿ)ತಂಡವನ್ನು 19.2 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು. ಇದಕ್ಕೆ ಮೊದಲು ಶ್ರೇಯಸ್ ಅಯ್ಯರ್ ಬಾರಿಸಿದ ಅರ್ಧಶತಕ (79,44 ಎಸೆತ, 8 ಬೌಂಡರಿ, 4 ಸಿಕ್ಸರ್) ಸಹಾಯದಿಂದ ಮುಂಬೈ 4 ವಿಕೆಟ್‌ಗಳ ನಷ್ಟಕ್ಕೆ 198 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News