ಅನುಮತಿ ಇಲ್ಲದೆ 'ಲವ್ ಜಿಹಾದ್' ವಿರುದ್ಧ ಅಭಿಯಾನ: ಸಂಘಪರಿವಾರ ಮುಖಂಡರ ವಿರುದ್ಧ ಪ್ರಕರಣ ದಾಖಲು

Update: 2018-01-23 07:48 GMT

ಉಡುಪಿ, ಜ. 23: ಉಡುಪಿ ಎಂಜಿಎಂ ಕಾಲೇಜ್ ಬಸ್ ನಿಲ್ದಾಣದ ಬಳಿ ಜ. 22ರಂದು ಅನುಮತಿ ಇಲ್ಲದೆ ಲವ್ ಜಿಹಾದ್ ವಿರುದ್ಧ ಜಾಗೃತಿ ಅಭಿಯಾನ ನಡೆಸಿದ ವಿಎಚ್‌ಪಿ, ಬಜರಂಗದಳ ಹಾಗೂ ದುರ್ಗಾ ವಾಹಿನಿಯ ಪ್ರಮುಖರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಎಚ್‌ಪಿ ಉಡುಪಿ ಜಿಲ್ಲಾಧ್ಯಕ್ಷ ವಿಲಾಸ್ ನಾಯಕ್, ಬಜರಂಗದಳ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್., ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್, ಜಿಲ್ಲಾ ಸಂಪರ್ಕ ಪ್ರಮುಖ್ ಸುರೇಂದ್ರ ಕೋಟೇಶ್ವರ, ವಿಎಚ್‌ಪಿ ನಗರ ಅಧ್ಯಕ್ಷ ಸಂತೋಷ್ ಸುವರ್ಣ, ಹೆಬ್ರಿ ಬಜರಂಗ ದಳದ ದಿನೇಶ್ ಶೆಟ್ಟಿ, ದುರ್ಗಾ ವಾಹಿನಿ ಪ್ರಮುಖರಾದ ಪದ್ಮ ರತ್ನಾಕರ, ಬಜರಂಗದಳದ ನಗರ ಸಂಚಾಲಕ ಲೋಕೇಶ ಶೆಟ್ಟಿಗಾರ್ ಹಾಗೂ ಇತರ ಸುಮಾರು 40 ಮಂದಿ ಸೇರಿ ಲವ್ ಜಿಹಾದ್ ವಿರುದ್ಧ ಜಾಗೃತಿ ಅಭಿಯಾನವನ್ನು ವಿದ್ಯಾರ್ಥಿನಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ನಡೆಸುತ್ತಿದ್ದರು.

ಸಂಘಟಕರು ತಮ್ಮ ಕೈಯಲ್ಲಿ ಲವ್ ಜಿಹಾದ್ ವಿರುದ್ಧ ಜಾಗೃತಿ ಅಭಿಯಾನ ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ ಉಡುಪಿ ಜಿಲ್ಲೆ ಎಂಬ ಮುದ್ರಿತ ಕರಪತ್ರಗಳನ್ನು ಕಾಲೇಜಿನ ವಿದ್ಯಾರ್ಥಿನಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಹಂಚುತ್ತಿದ್ದು, ಈ ಬಗ್ಗೆ ವಿಚಾರಿಸಿದಾಗ ಈ ಅಭಿಯಾನ ನಡೆಸಲು ಇವರಿಗೆ ಯಾವುದೇ ಅನುಮತಿ ಇಲ್ಲ ಎಂಬುದಾಗಿ ತಿಳಿಸಿದ್ದರು.

ಅವರು ಜಿಲ್ಲಾಡಳಿತದ ಯಾವುದೇ ಪ್ರಾಧಿಕಾರದ ಅಧಿಕೃತ ಅನುಮತಿ ಯನ್ನು ಪಡೆಯದೆ ಅಕ್ರಮ ಕೂಟ ಸೇರಿ ಉಡುಪಿ- ಮಣಿಪಾಲ ರಾಷ್ಟ್ರೀಯ ಹೆದ್ದಾರಿ 169ಎ ರಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯನ್ನು ಉಂಟು ಮಾಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ನಾರಾಯಣ ನೀಡಿದ ದೂರಿ ನಂತೆ ಕಲಂ: 143, 290ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News