ಜೆಸಿಐ ಮಂಗಳೂರು: 56ನೆ ವರ್ಷದ ಪದಾಧಿಕಾರಿಗಳ ಆಯ್ಕೆ

Update: 2018-01-23 11:56 GMT

ಮಂಗಳೂರು, ಜ.23: ಜೆಸಿಐ ಮಂಗಳೂರು ಇದರ 56ನೆ ವರ್ಷದ ಪದಾಧಿಕಾರಿಗಳ ಆಯ್ಕೆ ಸಮಾರಂಭವು ಇಲ್ಲಿನ ಮಲ್ಲಿಕಟ್ಟೆಯಲ್ಲಿರುವ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಶೈಲಜಾ ಎ. ರಾವ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಅವರೊಂದಿಗೆ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶ್ವೇತಾ ಜೈನ್ ಹಾಗೂ ಇತರ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.

ರೊಟರಿಯನ್ ರಾಜೇಂದ್ರ ಕಲ್ಬಾವಿ, ಜೆಸಿ ಅನಿಲ್ ಕುಮಾರ್ ಜೆ. (ಜೆಸಿಐ ಇಂಡಿಯಾದ ಮಾಜಿ ರಾಷ್ಟ್ರೀಯ ಕಾರ್ಯಕಾರಿ ಉಪಾಧ್ಯಕ್ಷ), ಜೆಸಿ ರಾಕೇಶ್ ಕುಂಜೂರು (ವಲಯ 15 2018ರ ವಲಯಾಧ್ಯಕ್ಷ), ಜೆಸಿ ಸದಾನಂದ ನಾವಡ ಮತ್ತು ಜೆಸಿ ಡಾ. ಅರವಿಂದ್ ರಾವ್ (ಮಾಜಿ ವಲಯಾಧ್ಯಕ್ಷ) ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಾಮಾಜಿಕ ಸೇವೆ ಮತ್ತು ವೈಯಕ್ತಿಕ ಬೆಳವಣಿಗೆಯ ಬಗ್ಗೆ ಕಲ್ಬಾವಿಯವರು ಮಾತನಾಡಿ ಅವೆರಡೂ ಜೊತೆಯಾಗಿ ಸಾಗುವಂಥದ್ದು ಎಂದು ತಿಳಿಸಿದರು. ಸಾಮಾಜಿಕವಾಗಿ ಸಕ್ರಿಯವಾಗಿರುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ಜೆಸಿ ರಾಕೇಶ್ ಅವರು ಜೆಸಿಐ ಅಸ್ತಿತ್ವಕ್ಕೆ ಬಂದ ಬಗ್ಗೆ ವಿವರಿಸುತ್ತಾ ಸಂಘವು 5000 ಸದಸ್ಯರನ್ನು ಹೊಂದುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು. ಯುವಕರನ್ನು ತರಬೇತಿ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವ ಮೂಲಕ ಜೆಸಿಐ ಯುವಜನತೆಯ ಭವಿಷ್ಯವನ್ನು ರೂಪಿಸುವಲ್ಲಿ ಯಾವ ರೀತಿ ಮುಖ್ಯ ಪಾತ್ರವನ್ನು ವಹಿಸುತ್ತಿದೆ ಎಂಬುದನ್ನು ವಿವರಿಸಿದರು.

ನಿಕಟಪೂರ್ವ ಅಧ್ಯಕ್ಷ ಜೆಸಿ ವಿಕಾಸ್ ಶೆಟ್ಟಿ ಅವರು ವಾರ್ಷಿಕ ವರದಿಯನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶೈಲಜಾ ಎ. ರಾವ್ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ತನ್ನ ಭವಿಷ್ಯದ ಯೋಜನೆಗಳು ಹಾಗೂ ಶಾಶ್ವತ ಯೋಜನೆಗಳಿಗಾಗಿ ಬಂಡವಾಳ ಸಂಗ್ರಹಣೆಯ ಬಗ್ಗೆ ಅವರು ಮಾತನಾಡಿದರು. ಇದೇ ವೇಳೆ ಸಂಘದ ಸದಸ್ಯರು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ರೂಪಿಸಲಾಗಿರುವ ಮ್ಯಾಗಝೀನ್ ದಿಶಾವನ್ನು ಅವರು ಬಿಡುಗಡೆ ಮಾಡಿದರು. ನೂತನ ಕಾರ್ಯದರ್ಶಿಯಾಗಿ ಶ್ವೇತಾ ಜೈನ್, ದಿಶಾ ಸಂಪಾದಕರಾಗಿ ಅಕ್ಷತಾ ಕಾಮತ್, ಜೆಸಿಆರ್‌ಟಿ ಮುಖ್ಯಸ್ಥರಾಗಿ ಚೇತನಾ ಜ್ಯೋತಿ ರಾಹುಲ್ ಮತ್ತು ಕಿರಿಯ ಜೆಸಿ ಅಧ್ಯಕ್ಷರಾಗಿ ವಿದ್ವಿತ್ ಜೈನ್ ಪ್ರಮಾಣ ವಚನ ಸ್ವೀಕರಿಸಿದರು.

ಸಮಾರಂಭದ ಕೊನೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗವನ್ನು ಏರಿರುವ ಜೆಸಿಐಯ ಮಾಜಿ ಅಧ್ಯಕ್ಷರಾದ ವಿಜಯ ವಿಷ್ಣು ಮಯ್ಯ ಹಾಗೂ ತಮ್ಮ ಜೀವನ ಅಮೂಲ್ಯ ಮೂವತ್ತು ವರ್ಷಗಳನ್ನು ಜೆಸಿಐಗಾಗಿ ಮುಡಿಪಿಟ್ಟ ಬಿ. ಕೃಷ್ಣಮೂರ್ತಿಯವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಶ್ವೇತಾ ಜೈನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News