ಕಾಂಗ್ರೆಸ್‌ನದ್ದು ಭ್ರಷ್ಟಾಚಾರ, ಜಾತಿ, ಕುಟುಂಬ ಸಂಸ್ಕೃತಿ: ಉಡುಪಿಯಲ್ಲಿ ಕೇಂದ್ರ ಸಚಿವ ಜಾವಡೇಕರ್

Update: 2018-01-23 14:09 GMT

ಉಡುಪಿ, ಜ.23: ಕಾಂಗ್ರೆಸ್ ಎಂಬುದು ಭ್ರಷ್ಟಾಚಾರ, ಜಾತಿ, ಹಣ, ಕುಟುಂಬ ಸಂಸ್ಕೃತಿಯಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ವಿಕಾಸ ಸಚಿವ ಹಾಗೂ ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಟೀಕಿಸಿದ್ದಾರೆ.

ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಕಿದಿಯೂರು ಹೊಟೇಲಿನ ಶೇಷಶಯನ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಬಿಜೆಪಿ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಈ ಬಾರಿಯ ರಾಜ್ಯದ ಚುನಾವಣೆ ಬಹಳ ಮಹತ್ವದ್ದಾಗಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಸೋಲು ಕಾಣುತ್ತಿದೆ. ಮುಂದಿನ ನೂರು ದಿನಗಳ ಬಳಿಕ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸೋತು ಹೋಗಲಿದೆ. ಈ ಬಾರಿಯ ಚುನಾವಣೆ ಎರಡು ಸಂಸ್ಕೃತಿಗಳ ನಡುವಿನ ಸಂಘರ್ಷವಾಗಿದೆ ಎಂದರು.

ಅಹಿಂದ ಘೋಷಣೆ ಮಾಡಿರುವ ಸಿದ್ದರಾಮಯ್ಯ ಸರಕಾರ ಕಳೆದ ಐದು ವರ್ಷಗಳಲ್ಲಿ ಕೇವಲ ಭ್ರಷ್ಟಾಚಾರವನ್ನು ಮಾತ್ರ ಮಾಡಿದೆ. ಟಿಪ್ಪುಜಯಂತಿ ಮಾಡುವ ಕಾಂಗ್ರೆಸ್ ಸರಕಾರ ವಿವೇಕಾನಂದ ಜಯಂತಿ ಮಾಡುವುದಿಲ್ಲ. ಶಾಧಿ ಭಾಗ್ಯ ಕೇವಲ ಮುಸ್ಲಿಮರ ತುಷ್ಠಿಕರಣಕ್ಕೆ ಜಾರಿಗೆ ತಂದಿರುವ ಯೋಜನೆ ಯಾಗಿದೆ. ಇಂದಿಗೂ ಆ ಯೋಜನೆ ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ಅವರು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿಲ್ಲ. ಆದರೆ ಈಗ ರಾಹುಲ್ ಗಾಂಧಿ ಮಠಕ್ಕೆ ಬರುತ್ತಿದ್ದಾರೆ. ಕರ್ನಾಟಕದ ಜನತೆಗೆ ಭಕ್ತಿ ಹಾಗೂ ರಾಜಕೀಯಕ್ಕೆ ಇರುವ ವ್ಯತ್ಯಾಸ ತಿಳಿದಿದೆ. ನಿಜ ಭಕ್ತರು ಯಾರು ಎಂಬುದು ಎಲ್ಲರಿಗೂ ಗೊತ್ತು. ಗುಜರಾತ್ ಚುನಾವಣೆಯಲ್ಲಿ ರಾಹುಲ್ ಗಾಂಧಿ ದೇವಸ್ಥಾನ ಭೇಟಿ ಕೈಗೂಡಲಿಲ್ಲ ಎಂದು ಅವರು ತಿಳಿಸಿದರು.

ಮರಳುಗಾರಿಕೆ ಸಮಸ್ಯೆಯಿಂದ ಕಳೆದ ಎರಡು ವರ್ಷಗಳಿಂದ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಸರಕಾರ ಕಾನೂನು ಬಾಹಿರವಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ರೈತರ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ ಸರಕಾರ ರೈತ ವಿರೋಧಿ ಎಂದು ಅವರು ದೂರಿದರು.

‘ಕರ್ನಾಟಕದ ವಿಕಾಸ ಜೋಡಿ, ಯಡಿಯೂರಪ್ಪ -ಮೋದಿ’ ಎಂಬ ಕರ್ನಾಟಕ ಚುನಾವಣೆಗೆ ಹೊಸ ಘೋಷವಾಕ್ಯವನ್ನು ಜಾವಡೇಕರ್ ಈ ಸಂದರ್ಭದಲ್ಲಿ ಘೋಷಿಸಿದರು.

ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಕಾರ್ಕಳ ಶಾಸಕ ಸುನೀಲ್ ಕುಮಾರ್, ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸ್ವಾಗತಿಸಿದರು. ಕುಯಿಲಾಡಿ ಸುರೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

ಮಹಾದಾಯಿ ವಿಚಾರ ವಿವಾದ ನ್ಯಾಯಾಧೀಕರಣದಲ್ಲಿದೆ. ಹಿಂದಿನ ಮನಮೋಹನ ಸರಕಾರ ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿತ್ತು. ಅಧಿಕಾರದಲ್ಲಿದ್ದಾಗ ಸೋನಿಯಾ ಗಾಂಧಿ ಈ ಬಗ್ಗೆ ಮಾತನಾಡಿರಲಿಲ್ಲ. ಹಲವು ವರ್ಷಗಳ ಕಾಲ ಗೋವಾ ಮತ್ತು ಕರ್ನಾಟಕದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರಕಾರ ಈ ಸಮಸ್ಯೆ ಬಗೆಹರಿಸಿಲ್ಲ. ಆದರೆ ಈಗಿನ ಗೋವಾ ಮುಖ್ಯಮಂತ್ರಿ ಪಾರಿಕ್ಕರ್ ಕರ್ನಾಟಕಕ್ಕೆ ಕುಡಿಯುವ ನೀರು ಕೊಡುವುದಾಗಿ ಹೇಳಿದ್ದಾರೆ. ಇದನ್ನು ಸ್ವಾಗತಿಸುವ ಬದಲು ಬಂದ್ ಮಾಡುವ ಕೆಲಸವನ್ನು ಮಾಡಲಾಗುತ್ತಿದೆ. ಇದರ ಹಿಂದೆ ಯಾರು ಇದ್ದಾರೆ ಎಂಬುದು ಗೊತ್ತು. ಈ ರೀತಿಯ ರಾಜಕಾರಣ ಒಳ್ಳೆಯದಲ್ಲ ಎಂದು ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News