​ರಾಜ್ಯದಲ್ಲಿ ನಡೆಯೋದು ರಾಜಕೀಯ ಸಂಸ್ಕೃತಿಯ ಚುನಾವಣೆ: ಮಂಗಳೂರಿನಲ್ಲಿ ಕೇಂದ್ರ ಸಚಿವ ಜಾವಡೇಕರ್‌

Update: 2018-01-23 17:24 GMT

ಮಂಗಳೂರು, ಜ. 23: ರಾಜ್ಯದಲ್ಲಿ ನಡೆಯಲಿರುವುದು ಕಾಂಗ್ರೆಸ್-ಬಿಜೆಪಿ ನಡುವಿನ ಚುನಾವಣೆಯಲ್ಲ. ಬದಲಾಗಿ ಎರಡು ಪಕ್ಷಗಳ ರಾಜಕೀಯ ಸಂಸ್ಕೃತಿಯ ಚುನಾವಣೆಯಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ನಡೆದ ಜಿಲ್ಲಾ ಬಿಜೆಪಿ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಜಾತಿ ರಾಜಕರಣ, ಹಣ ಬಲದ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಇನ್ನು ಕರ್ನಾಟಕವೊಂದೇ ಬಾಕಿ ಉಳಿದಿದೆ. ದೇಶದ ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ, ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶ, ಚತ್ತೀಸ್‌ಗಢ, ಉತ್ತರ ಪ್ರದೇಶ, ಜಾರ್ಖಂಡ್, ಅಸ್ಸಾಂ, ಮಣಿಪುರ, ಸಿಕ್ಕಿಂ, ನಾಗಾಲ್ಯಾಂಡ್ ಸಹಿತ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಪಡೆದುಕೊಂಡಿದೆ. ಕರ್ನಾಟಕದಲ್ಲಿ ನಡೆಯಲಿರುವ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಹೊರ ನಡೆದು ಬಿಜೆಪಿಯ ಆಗಮನವಾಗಲಿದೆ ಎಂದು ಅವರು ಭವಿಷ್ಯ ನುಡಿದರು.

ದ.ಕ. ಜಿಲ್ಲೆಯಲ್ಲಿ ಕಳೆದ 28 ದಿನಗಳಲ್ಲಿ 5 ಹತ್ಯೆಗಳು ನಡೆದಿವೆ. ಎರಡು ಹತ್ಯೆಗಳು ಜೈಲುಗಳಲ್ಲಿ ಆಗಿವೆ. ಗೌರಿ ಲಂಕೇಶ್, ಕಲ್ಬುರ್ಗಿಯವರ ಹತ್ಯೆಯೂ ಕಾಂಗ್ರೆಸ್ ಆಡಳಿತ ಸಂದರ್ಭದಲ್ಲೇ ನಡೆದಿವೆ. ಆದರೆ, ಯಾವ ಪ್ರಕರಣದ ತನಿಖೆಯೂ ಸರಿಯಾಗಿ ನಡೆದಿಲ್ಲ. ಜಿಲ್ಲೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. ಡ್ರಗ್ಸ್ ಜಾಲ ವ್ಯಾಪ್ತಿಸಿದೆ. ಜಿಲ್ಲೆಯ ಮಂತ್ರಿಗಳೇ ಕ್ರಿಮಿನಲ್‌ಗಳನ್ನಿಟ್ಟು ತಿರುಗಾಡುವ ಸ್ಥಿತಿ ಇದೆ. ಇದು ಯಾವ ರಾಜಧರ್ಮ ಎಂದವರು ಪ್ರಶ್ನಿಸಿದರು.

ಅನ್ನಭಾಗ್ಯ ಯೋಜನೆಗೆ ಪ್ರತಿ ಕೆ.ಜಿ. ಅಕ್ಕಿಗೆ ಕೇಂದ್ರದಿಂದ 28 ರೂ. ಬರುತ್ತಿದೆ. ರಾಜ್ಯ ಸರಕಾರದ ಕೇವಲ 3 ರೂ. ನೀಡುತ್ತಿದೆ. ಇದು ಕಾಂಗ್ರೆಸ್‌ನ ಅನ್ನಭಾಗ್ಯವಲ್ಲ, ನರೇಂದ್ರ ಮೋದಿ ಅನ್ನಭಾಗ್ಯ ಎಂದರು.

ಸಿದ್ದರಾಮಯ್ಯರಿಗೆ ಅಮಿತ್ ಶಾ ಭಯ: ಸಂಸದೆ ಶೋಭಾ

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆಯ ಸಮಾರೋಪ ಜ. 25ರಂದು ಮೈಸೂರಿನಲ್ಲಿ ನಡೆಯಲಿದ್ದು, ಅಮಿತ್ ಶಾ ಭಾಗವಹಿಸಲಿದ್ದಾರೆ. ಇದನ್ನು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗ ಭಯ ಶುರುವಾಗಿದೆ. ಆದ್ದರಿಂದಲೇ ಸಂಘ ಸಂಸ್ಥೆಗಳನ್ನು ದುರುಪಯೋಗಪಡಿಸಿ ಅದೇ ದಿನ ಬಂದ್ ಆಚರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಮುಖಂಡರಾದ ಗಣೇಶ್ ಕಾರ್ಣಿಕ್, ಸಂಜೀವ ಮಠಂದೂರು, ಎಸ್. ಅಂಗಾರ, ಪ್ರತಾಪ್‌ಸಿಂಹ ನಾಯಕ್, ಮೋನಪ್ಪ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News