ಉಡುಪಿ: ಪಿತ್ರೋಡಿ ಫಿಶ್‌ಮಿಲ್‌ಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಆದೇಶ

Update: 2018-01-23 14:32 GMT

ಉಡುಪಿ, ಜ.23: ಕಾನೂನು ಉಲ್ಲಂಘಿಸಿರುವ ಉದ್ಯಾವರ ಗ್ರಾಮದ ಪಿತ್ರೋಡಿಯ ಮೂರು ಫಿಶ್‌ಮಿಲ್‌ಗಳ ವಿರುದ್ಧ ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಾಹಣ ಪ್ರಾಧಿಕಾರ ಆರು ವಾರದೊಳಗೆ ಕ್ರಮಕೈಗೊಳ್ಳುವಂತೆ ರಾಜ್ಯ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿದೆ ಎಂದು ಪಿತ್ರೋಡಿಯ ಪುಷ್ಪರಾಜ್ ಕೋಟ್ಯಾನ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ವಾಗಿ, ನಕಲಿ ಪಂಚಾಯತ್ ದಾಖಲೆಯ ಸೃಷ್ಠಿಸಿ ಹಾಗೂ ಸಿಆರ್‌ಝೆಡ್ ನಿಯಮವನ್ನು ಉಲ್ಲಂಘಿಸಿ ಸುಮಾರು ಒಂದು ದಶಕದಿಂದ ಪಿತ್ರೋಡಿ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಿಂದೂಸ್ಥಾನ್ ಮೆರೈನ್, ಯಶಸ್ವಿ ಹಾಗೂ ಯುನಿಟಿ ಫಿಶ್‌ಮಿಲ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಿತ್ರೋಡಿಯ ಐದು ಮಂದಿ ಸೂಕ್ತ ದಾಖಲೆಗಳೊಂದಿಗೆ ಹೈಕೋಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್. ಜಿ.ರಮೇಶ್ ಹಾಗೂ ಪಿ.ಎಸ್.ದಿನೇಶ್ ಕುಮಾರ್ ಫಿಶ್‌ಮಿಲ್ ವಿರುದ್ಧ ಕ್ರಮಕ್ಕೆ ಆದೇಶ ನೀಡಿದರು ಎಂದು ಹೇಳಿದರು.

ಈ ಮೂರು ಫಿಶ್‌ಮಿಲ್‌ಗಳು ಜನವಸತಿ ಪ್ರದೇಶದಲ್ಲಿ ಕಾರ್ಯಚರಿಸುತ್ತಿವೆ. ಇದರ ವಿರುದ್ಧ ಸ್ಥಳೀಯರು ಹೋರಾಟ ನಡೆಸಿದರೂ ಸಂಬಂಧಪಟ್ಟ ಇಲಾಖೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಕಾರ್ಖಾನೆಯ ತ್ಯಾಜ್ಯ ನೀರನ್ನು ನೇರವಾಗಿ ಉದ್ಯಾವರ ಪಾಪನಾಶಿನಿ ನದಿಗೆ ಬಿಡುತ್ತಿರುವುದರಿಂದ ನದಿ ನೀರು ಸಂಪೂರ್ಣ ಮಲೀನಗೊಂಡಿದೆ. ಪರಿಸರದ ಮಲೀನತೆಯಿಂದ ಸುತ್ತಲಿನ ಐದು ಗ್ರಾಮಗಳ ಜನ ಆರೋಗ್ಯ ಹದಗೆಟ್ಟಿದೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ದಿವಾಕರ ಬೊಳ್ಜೆ, ಸಂಜೀವ ಮೆಂಡನ್, ಪ್ರತಾಪ್ ಕುಮಾರ್, ಶಿವರಾಮ ಪುತ್ರನ್, ಉಮೇಶ್ ಕರ್ಕೇರ, ಉದಯ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News