ಆರೋಗ್ಯ ಶಿಕ್ಷಣದ ಮೂಲಕ ಆರೋಗ್ಯಕರ ಸಮಾಜ: ಡಾ.ಚಂದ್ರಶೇಖರ್

Update: 2018-01-23 14:34 GMT

ಉಡುಪಿ, ಜ.23: ವಿದ್ಯಾರ್ಥಿಗಳಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದರೆ ಆರೋಗ್ಯಕರ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರ ಶೇಖರ್ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಉಡುಪಿ ಕೋಆಪರೇಟಿವ್ ಟೌನ್ ಬ್ಯಾಂಕ್‌ನ ಸಹಭಾಗಿತ್ವದಲ್ಲಿ ಆಂತರಿಕ ಗುಣಮಟ್ಟ ಖಾತರಿ ಘಟಕದ ಮಾರ್ಗದರ್ಶನದಲ್ಲಿ ಕನ್ನಡ ಮತ್ತು ದೈಹಿಕ ಶಿಕ್ಷಣ ವಿಭಾಗ ಜಂಟಿಯಾಗಿ ಮಂಗಳವಾರ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಆಯೋಜಿಸಲಾದ ಆಧುನಿಕ ಸವಾಲುಗಳ ನಡುವೆ ಆರೋಗ್ಯದ ರಕ್ಷಣೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡುತಿದ್ದರು.

ಭಾರತದಲ್ಲಿ ಶೇ.35-40ರಷ್ಟು ಮಂದಿ ಬೊಜ್ಜು, ಶೇ.25-30ರಷ್ಟು ಅಧಿಕ ರಕ್ತದೊತ್ತಡ, ಶೇ.12ರಷ್ಟು ಮಧುಮೇಹ ಮತ್ತು ಶೇ.7ರಷ್ಟು ಹೃದಯದ ಸಮಸ್ಯೆ ಗಳಿಂದ ಬಳಲುತ್ತಿದ್ದಾರೆ. ಇಂದಿನ ಒತ್ತಡದ ಪರಿಸ್ಥಿತಿಯೇ ಈ ಎಲ್ಲ ಕಾಯಿಲೆ ಗಳಿಗೆ ಮೂಲ ಕಾರಣ. ಆದುದರಿಂದ ನಾವು ನಮ್ಮ ಜೀವನ ಶೈಲಿಯನ್ನು ಬದ ಲಾಯಿಸಿಕೊಳ್ಳಬೇಕು ಎಂದರು.

ಪ್ರತಿದಿನ ವ್ಯಾಯಾಮ ಮಾಡುವುದರಿಂದ ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಕೂಡ ದೂರ ಇಡಬಹುದು. ಜಂಕ್ ಫುಡ್ ಸೇವಿಸುವುದನ್ನು ಕಡಿಮೆ ಮಾಡುವ ಮೂಲಕ ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ಕುಡಿತ, ಸಿಗರೇಟ್ ಸೇವನೆ, ಮಾದಕ ದ್ರವ್ಯಗಳಿಂದ ದೂರ ಇರಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಾಗಾರವನ್ನು ಟೌನ್ ಬ್ಯಾಂಕಿನ ಅಧ್ಯಕ್ಷ ಕೆ.ಕೃಷ್ಮರಾಜ ಸರಳಾಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಜಗದೀಶ್ ಶೆಟ್ಟಿ ವಹಿಸಿದ್ದರು. ಮಂಗಳೂರು ಪ್ರಕೃತಿ ಚಿಕಿತ್ಸಾ ತಜ್ಞ ಡಾ.ವಿಜಯ ಲಕ್ಷ್ಮೀ ಎಸ್.ನಾಯಕ್, ಯೋಗ ಮತ್ತು ಮುದ್ರಾ ತಜ್ಞ ಶ್ರೀನಿವಾಸ ಬಲ್ಲಾಳ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಿ.ವಿ.ಲಕ್ಷ್ಮೀ ನಾರಾಯಣ, ಖಾತರಿ ಘಟಕದ ಮುಖ್ಯಸ್ಥ ರಾಘವೇಂದ್ರ ಎ. ಉಪಸ್ಥಿತರಿದ್ದರು.

ಕಾಲೇಜಿನ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಶ್ರೀಕಾಂತ್ ಸಿದ್ಧಾಪುರ ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ್ ಕರಬ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News