ಮಹಾತ್ಮರ ಸ್ಮರಣೆಯಿಂದ ಉತ್ತಮ ಸಮಾಜ: ನಳಿನಿ ರಾವ್

Update: 2018-01-23 14:40 GMT

ಉಡುಪಿ, ಜ.23: ಮಹಾತ್ಮರು, ಕವಿಗಳು, ಸಾಹಿತಿಗಳು, ಸತ್ಪುರುಷರು, ಯೋಗಿಗಳು ನಾಡಿನ ಸಂಸ್ಕೃತಿ, ಧರ್ಮ, ವಿಚಾರಧಾರೆಗಳನ್ನು ಉಳಿಸಿ, ಬೆಳೆಸುವುದಕ್ಕಾಗಿ ಅನನ್ಯವಾದ ಕೊಡುಗೆ ನೀಡಿದ್ದಾರೆ ಎಂದು ಉಡುಪಿ ತಾಪಂ ಅಧ್ಯ್ಷೆ ನಳಿನಿ ಪ್ರದೀಪ್ ರಾವ್ ಹೇಳಿದ್ದಾರೆ.

ಜಿಲ್ಲಾಡಳಿತ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಆಶ್ರಯ ದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ತರ ಸುವರ್ಣ ಸಂಭ್ರಮ ಸಭಾಭವನದಲ್ಲಿ ನಡೆದ ಮಹಾಯೋಗಿ ವೇಮನ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಮಾಜದಲ್ಲಿ ಕಷ್ಟ ಕಾರ್ಪಣ್ಯ ಇದ್ದರೂ, ಒಳ್ಳೆಯ ತತ್ವ, ಆದರ್ಶ, ವಿಚಾರ ಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಜೀವಿಸಬೇಕು. ಹುಟ್ಟುವಾಗ ಎಲ್ಲರೂ ಒಳ್ಳೆಯವರು, ಕೆಟ್ಟವರಾಗಿರುವುದಿಲ್ಲ. ನಮ್ಮ ಸುತ್ತಮುತ್ತಲ ಸಮಾಜ, ಘಟನೆಗಳು ನಮ್ಮನ್ನು ರೂಪುಗೊಳಿಸುತ್ತವೆ. ಉತ್ತಮರ ಮಾರ್ಗದರ್ಶನದಿಂದ ಭವಿಷ್ಯದಲ್ಲಿ ಅತ್ಯಮೂಲ್ಯವಾದ ಬದುಕು ಸಾಗಿಸಬಹುದು ಎಂದು ತೋರಿಸಿ ಕೊಟ್ಟವರು ಮಹಾಯೋಗಿ ವೇಮನ ಎಂದು ನಳಿನಿ ರಾವ್ ವಿವರಿಸಿದರು.

ಸಜ್ಜನರ ಸಂಘದಿಂದ ಮಹಾಯೋಗಿಯಾದ ವೇಮನ ನಿದರ್ಶನ ನಮಗೆ ಮಾದರಿಯಾಗಲಿ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ತಿಳಿಸಿದರು. ಸಾಹಿತಿ ಮೇಟಿ ಮುದಿಯಪ್ಪ ವಿಶೇಷ ಉಪನ್ಯಾಸ ನೀಡಿ, ಸರ್ವಜ್ಞನ ಸಮಕಾಲೀನರಾದ ವೇಮನು ಆಂಧ್ರಪ್ರದೇಶದ ಮನೆಮನಗಳಲ್ಲಿ ನೆಲೆನಿಂತ ವ್ಯಕ್ತಿ. ಬುದ್ಧ ಮೋಕ್ಷದ ಹುಡುಕಾಟದಲ್ಲಿ ಲೀನವಾದಂತೆ, ವೇಮನು ಪ್ರಪಂಚದ ಪರಮ ಸುಖವನ್ನು ಹುಡುಕುತ್ತಾ, ಸಮಾಜದ ಎಲ್ಲ ವರ್ಗದವರಿಗೆ ತತ್ವಾದರ್ಶಗಳನ್ನು ಬೋಧಿಸಿದ ಮಹಾನ್ ಯೋಗಿ ಎಂದರು.

ಕಾರ್ಯಕ್ರಮದಲ್ಲಿ ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ತಾಪಂ ಸದಸ್ಯೆ ರಜನಿ ಅಂಚನ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ದೇವದಾಸ ಪೈ ಸ್ವಾಗತಿಸಿದರು. ಹಿಂದೂ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಗಣಪತಿ ಕಾರಂತ್ ವಂದಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ನಿರೂಪಿಸಿದರು. ಅನುರಾಧ ಮಯ್ಯ, ಹಿಲಿಯಾಣ ಇವರಿಂದ ಗೀತ ಗಾಯನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News