'ಪಲ್ಗುಣಿ ನದಿ ಮಾಲಿನ್ಯಗೊಳಿಸುವರ ವಿರುದ್ಧ ಕ್ರಮಕ್ಕೆ ಒತ್ತಾಯ'

Update: 2018-01-23 15:42 GMT

ಮಂಗಳೂರು, ಜ.23: ದ.ಕ. ಜಿಲ್ಲೆಯ ಪ್ರಮುಖ ನದಿಗಳಲ್ಲಿ ಒಂದಾದ ಪಲ್ಗುಣಿ ನದಿ ಮಾಲಿನ್ಯಗೊಳ್ಳುತ್ತಿದ್ದು, ಇದಕ್ಕೆ ಕಾರಣವಾಗುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ವತಿಯಿಂದ ಸ್ಥಳೀಯರ ಉಪಸ್ಥಿತಿಯಲ್ಲಿ ಇಂದು ಜಾಥಾ ಹಾಗೂ ಪ್ರತಿಭಟನೆ ನಡೆಯಿತು.

ನಗರದ ಮಿನಿ ವಿಧಾನಸೌಧದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಥಾದ ಬಳಿಕ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಪಲ್ಗುಣಿ ನದಿಯ ನೀರನ್ನು ಕೂಳೂರು, ತೋಕೂರು, ಮೇಲ್‌ಕೊಪ್ಪಲು, ಅತ್ರೆಬೈಲು, ಮರವೂರು ಸೇರಿದಂತೆ ಹಲವಾರು ಗ್ರಾಮಗಳು ಬಳಸುತ್ತಿದೆ. ಮರವೂರಿನಲ್ಲಿ ಅಣೆಕಟ್ಟು ನಿರ್ಮಿಸಿ ನದಿ ನೀರನ್ನು ಕುಡಿಯುವುದಕ್ಕಾಗಿಯೂ ಬಳಸಲಾಗುತ್ತಿದೆ. ಇಂತಹ ಫಲ್ಗುಣಿ ನದಿ ನೀರಿಗೆ ಕೈಗಾರಿಕೆಗಳ ತ್ಯಾಜ್ಯ ಸೇರಿ ಮಲಿನವಾಗುತ್ತಿದ್ದು, ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು.

ಪಲ್ಗುಣಿ ನದಿಯನ್ನು ಸೇರುವ ತೋಕೂರು ಹಳ್ಳ ಸಂಪೂರ್ಣವಾಗಿ ಮಾಲಿನ್ಯಗೊಂಡು ಕೊಳೆತು ನಾರುತ್ತಿದೆ. ನದಿ ದಂಡೆಯಲ್ಲಿರುವ ಹಲವು ಸ್ಥಳೀಯರು ಮೀನುಗಾರಿಕೆ ಮಾಡಿ ಜೀವನ ಸಾಗಿಸುತ್ತಿದ್ದವರು ಅದನ್ನು ಸ್ಥಗಿತಗೊಳಿಸಿದ್ದಾರೆ. ತರಕಾರಿ ಬೆಳೆಗಳನ್ನೂ ಸ್ಥಳೀಯರು ನಿಲ್ಲಿಸಿದ್ದಾರೆ. ಇಲ್ಲಿನ ಜನರಿಗೆ ಆರೋಗ್ಯ ಸಮಸ್ಯೆಯೂ ಕಾಡುತ್ತಿದೆ  ಎಂದು ಮುನೀರ್ ಕಾಟಿಪಳ್ಳ ದೂರಿದರು.

ಎಂಆರ್‌ಪಿಎಲ್ ಬಳಿ ಉಗಮಗೊಳ್ಳುವ ತೋಕೂರು ಹಳ್ಳ ತೋಕೂರು ಬಳಿ ಪಲ್ಗುಣಿ ನದಿಯನ್ನು ಸೇರುತ್ತದೆ. ಕುದುರೆಮುಖದಿಂದ ಜೋಕಟ್ಟೆ ಸಾಗುವ ತೋಕೂರು ಬಳಿ ತೋಕೂರು ಹಳ್ಳ ದುರ್ವಾಸನೆ ಬೀರುತ್ತಿದೆ. ಇಲ್ಲಿ ಹಲವಾರು ಮಧ್ಯಮ ಗಾತ್ರದ ಕೈಗಾರಿಕೆಗಳಿದ್ದು, ಅದರ ತ್ಯಾಜ್ಯ ನೀರು ತೋಕೂರು ಹಳ್ಳಕ್ಕೆ ಸೇರುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಹಿಂದೆ ಆರ್‌ಟಿಐನಲ್ಲಿ ಮಾಹಿತಿ ಕೇಳಿದಾಗ ಕೈಗಾರಿಕೆಗಳವರು ತಮ್ಮ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಮರುಬಳಕೆ ಮಾಡುತ್ತಿರುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಉತ್ತರಿಸಿತ್ತು. ಹಾಗಿದ್ದಲ್ಲಿ ಈ ಮಾಲಿನ್ಯಕ್ಕೆ ಕಾರಣ ಯಾರು ಎಂಬುದನ್ನು ಜಿಲ್ಲಾಡಳಿತ ಪತ್ತೆ ಹಚ್ಚಬೇಕಾಗಿದೆ ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜೋಕಟ್ಟೆ ಗ್ರಾ.ಪಂ. ಸದಸ್ಯ ಅಬೂಬಕರ್, ಜೀವನ್‌ರಾಜ್ ಕುತ್ತಾರ್, ರಫೀಕ್, ಹನೀಫ್, ಅಶ್ರಫ, ಆಶಾ ಬೋಳೂರು, ಶಮೀಮಾ, ಯೋಗೀಶ್ ಜಪ್ಪಿನಮೊಗರು, ಸಾದಿಕ್, ನವೀನ್ ಕೊಂಚಾಡಿ, ನೌಷಾದ್ ಬೆಂಗ್ರೆ, ಚರಣ್ ಶೆಟಿ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರತಿಭಟನಕಾರನ್ನುದ್ದೇಶಿಸಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್, ಮನಪಾ ಸದಸ್ಯ ದಯಾನಂದ ಶೆಟ್ಟಿ ಮಾತನಾಡಿದರು.

ಪಲ್ಗುಣಿ ನದಿ ಉಳಿಸಲು ಒಂದಾಗೋಣ
ಧರ್ಮದ ಆಧಾರದಲ್ಲಿ ನಡೆಸುವ ಹೋರಾಟವಿಂದು ನಮ್ಮ ಜೀವ ಜಲವಾದ ಪಲ್ಗುಣಿ ನದಿಯನ್ನು ಉಳಿಸುವ ನಿಟ್ಟಿನಲ್ಲಿ ಪರಿವರ್ತನೆಯಾಗ ಬೇಕಿದೆ. ನಗರದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ಮುನೀರ್ ಕಾಟಿಪಳ್ಳ ಕರೆ ನೀಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News