ಪ್ರಚೋದನಾತ್ಮಕ ಭಾಷಣ: ಶಾಸಕ ಸುನೀಲ್ ಕುಮಾರ್ ವಿರುದ್ಧ ಪ್ರಕರಣ ದಾಖಲು

Update: 2018-01-23 15:28 GMT

ಬಂಟ್ವಾಳ, ಜ. 23: ಜನರಲ್ಲಿ ಧಾರ್ಮಿಕ ದ್ವೇಷ ಉಂಟಾಗುವಂತೆ ಭಾಷಣ ಮಾಡಿದ ಮತ್ತು ಧರ್ಮ-ಧರ್ಮಗಳ ನಡುವೆ ಸೌಹಾರ್ದತೆಗೆ ಭಂಗ ತಂದ ಆರೋಪದಡಿ ಬಿಜೆಪಿ ನಾಯಕ, ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ಅವರು ಮಂಗಳವಾರ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. 

ಸೋಮವಾರ ರಾತ್ರಿ ಕಲ್ಲಡ್ಕ ಕಡೆಗೆ ತೆರಳುತ್ತಿದ್ದ ಸಂದರ್ಭ, ಕಲ್ಲಡ್ಕದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಸುನೀಲ್ ಕುಮಾರ್ ಸಭೆಯನ್ನುದ್ದೇಶಿಸಿ ಸಾರ್ವಜನಿಕರಿಗೆ ಪ್ರಚೋದನಾತ್ಮಕವಾಗಿ ಭಾಷಣ ಮಾಡಿ, ಜನರಲ್ಲಿ ಧಾರ್ಮಿಕ ದ್ವೇಷ ಉಂಟಾಗುವಂತೆ ಮಾಡಿದ್ದು, ಧರ್ಮ-ಧರ್ಮಗಳ ನಡುವೆ ಸೌಹಾರ್ದತೆಗೆ ಭಂಗ ತಂದಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಪ್ರಶಾಂತ್ ಕುಲಾಲ್ ತಿಳಿಸಿದ್ದಾರೆ.

ಈ ಚುನಾವಣೆಯು ಅಲ್ಲಾಹನ ಮತ್ತು ರಾಮನ ನಡುವೆ ನಡೆಯುವ ಚುನಾವಣೆಯಾಗಿದ್ದು, ರಮಾನಾಥ ರೈ ಮತ್ತು ರಾಜೇಶ್ ನಾಯ್ಕ್ ನಡುವೆ ನಡೆಯುವ ಚುನಾವಣೆಯಲ್ಲ ಎಂದು ಹೇಳಿದ್ದಲ್ಲದೆ, ಅಲ್ಲಾಹನನ್ನು ಪ್ರೀತಿಸೋ ವ್ಯಕ್ತಿಗೆ ಮತ ಹಾಕ್ತೀರೋ, ಅಥವಾ ರಾಮನನ್ನು ಪ್ರೀತಿಸೋ ವ್ಯಕ್ತಿಗೆ ಮತ ಹಾಕುತ್ತೀರೋ ಎಂದು ಶಾಸಕ ಸುನೀಲ್ ಕುಮಾರ್ ಸಾರ್ವಜನಿಕರಿಗೆ ಪ್ರಚೋದನಾತ್ಮಕವಾಗಿ ಭಾಷಣ ಮಾಡಿರುವುದಾಗಿ ಪ್ರಶಾಂತ್ ದೂರಿನಲ್ಲಿ ವಿವರಿಸಿದ್ದಾರೆ.

ಈ ಸಂಬಂಧ ಬಂಟ್ವಾಳ ನಗರ ಠಾಣೆ ಪೊಲೀಸರು ಅಪರಾಧ ಕ್ರಮಾಂಕ 16/2018 ಕಲಂ 153(ಎ), 505(2) ಐಪಿಸಿಯಂತೆ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News