ಅಮಿತ್ ಶಾ ಖುಲಾಸೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಿಬಿಐ ವಿರೋಧ

Update: 2018-01-23 16:45 GMT

ಹೊಸದಿಲ್ಲಿ, ಜ.23: ಸೊಹ್ರಾಬುದ್ದೀನ್ ಶೇಖ್ ‘ನಕಲಿ ಎನ್‌ಕೌಂಟರ್’ ಪ್ರಕರಣದಲ್ಲಿ ಕೆಳ ನ್ಯಾಯಾಲಯವೊಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾರನ್ನು ಖುಲಾಸೆಗೊಳಿಸಿರುವುದನ್ನು ಸಿಬಿಐ ಪ್ರಶ್ನಿಸದ ಬಗ್ಗೆ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ವಿರೋಧಿಸುವುದಾಗಿ ಸಿಬಿಐ ತಿಳಿಸಿದೆ.

  ಅಮಿತ್ ಶಾರನ್ನು ಖುಲಾಸೆಗೊಳಿಸಿ ಡಿ.30ರಂದು ವಿಶೇಷ ಸಿಬಿಐ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸದ ಸಿಬಿಐ ನಡೆ ‘ಅಕ್ರಮ, ದುರುದ್ದೇಶದ ಮತ್ತು ಸ್ವೇಚ್ಛಾನುಸಾರ’ದ ಕ್ರಮವಾಗಿದೆ ಎಂದು ವ್ಯಾಖ್ಯಾನಿಸಿ ಬಾಂಬೆ ವಕೀಲರ ಸಂಘ ಕಳೆದ ವಾರ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿತ್ತು. ಅರ್ಜಿಯ ವಿಚಾರಣೆ ಸಂದರ್ಭ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲ ದುಷ್ಯಂತ್ ದವೆ, ಈ ಪ್ರಕರಣದ ವಿಚಾರಣೆಗೆ ಆರಂಭದಲ್ಲಿ ನಿಗದಿಯಾಗಿದ್ದ ಸಿಬಿಐ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿರುವ ಬಗ್ಗೆ ದಾಖಲೆಯನ್ನು ಕೇಳಲಾಗಿದೆ. ಅಲ್ಲದೆ ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಗುಜರಾತ್‌ನಿಂದ ಮುಂಬೈಗೆ ವರ್ಗಾಯಿಸಿದ್ದು ವಿಚಾರಣೆ ತ್ವರಿತವಾಗಿ ನಡೆಯಬೇಕು ಎಂದು ಒತ್ತಾಯಿಸಿದರು.

 ಈ ಸಂದರ್ಭ ಹೇಳಿಕೆ ನೀಡಿದ ಸಿಬಿಐ ಪರ ವಕೀಲ ಅನಿಲ್ ಸಿಂಗ್, ಈ ಅರ್ಜಿಯನ್ನು ನಾವು ವಿರೋಧಿಸುತ್ತೇವೆ. ಈ ಅರ್ಜಿಯ ಸಮರ್ಥನೀಯತೆಯ ಕುರಿತು ಪ್ರಶ್ನೆಗಳಿವೆ . ಖುಲಾಸೆ ಆದೇಶ 2014ರಲ್ಲಿ ನೀಡಲಾಗಿದೆ. ಇಷ್ಟು ವಿಳಂಬವಾಗಿ ಅರ್ಜಿ ಸಲ್ಲಿಸಿದ ಬಗ್ಗೆಯೂ ನಾವು ಪ್ರಶ್ನಿಸುತ್ತೇವೆ ಎಂದು ಹೇಳಿದರು. ಸಿಬಿಐ ವಕೀಲರು ಇನ್ನಷ್ಟು ಕಾಲಾವಕಾಶ ಕೋರಿದ ಕಾರಣ ವಿಭಾಗೀಯ ಪೀಠವು ಮುಂದಿನ ವಿಚಾರಣೆಯನ್ನು ಫೆ.13ಕ್ಕೆ ನಿಗದಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News