ಭಾರತ, ಪಾಕ್ ಒಪ್ಪಿದರೆ ಮಾತ್ರ ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ

Update: 2018-01-23 16:45 GMT

ವಿಶ್ವಸಂಸ್ಥೆ, ಜ. 23: ಸಂಬಂಧಪಟ್ಟ ಎಲ್ಲ ಪಕ್ಷಗಳು ಒಪ್ಪದ ಹೊರತು ಕಾಶ್ಮೀರ ವಿವಾದವನ್ನು ಬಗೆಹರಿಸಲು ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್ ಹೇಳಿದ್ದಾರೆ ಹಾಗೂ ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವಂತೆ ಭಾರತ ಮತ್ತು ಪಾಕಿಸ್ತಾನಗಳಿಗೆ ಕರೆ ನೀಡಿದ್ದಾರೆ.

ಮಧ್ಯಸ್ಥಿಕೆಗೆ ವಿಶ್ವಸಂಸ್ಥೆ ಯಾವಾಗಲೂ ಸಿದ್ಧವಿದೆ, ಆದರೆ ಮಾತುಕತೆಯಲ್ಲಿ ಅದನ್ನು ತೊಡಗಿಸಿಕೊಳ್ಳುವ ವಿಷಯದಲ್ಲಿ ಸಂಬಂಧಪಟ್ಟ ಎಲ್ಲ ಪಕ್ಷಗಳು ಒಮ್ಮತ ಹೊಂದಿರಬೇಕು ಎಂದು ವಿಶ್ವಸಂಸ್ಥೆ ಮಹಾಕಾರ್ಯದರ್ಶಿಯ ವಕ್ತಾರ ಸ್ಟೀಫನ್ ಡುಜರಿಕ್ ಹೇಳಿದರು.

 ಭಾರತ ಮತ್ತು ಪಾಕಿಸ್ತಾನಗಳ ಗಡಿಯಲ್ಲಿ ಪ್ರಸಕ್ತ ನಡೆಯುತ್ತಿರುವ ಸಂಘರ್ಷಗಳು ಹಾಗೂ ಹೆಚ್ಚುತ್ತಿರುವ ಉದ್ವಿಗ್ನತೆ ಬಗ್ಗೆ ಪ್ರತಿಕ್ರಿಯಿಸಿದ ಡುಜರಿಕ್, ‘‘ಈ ಬಗ್ಗೆ ನಮಗೆ ಮಾಹಿತಿಯಿದೆ. ಕಳೆದ 10 ದಿನಗಳ ಅವಧಿಯಲ್ಲಿ ಏನು ನಡೆಯುತ್ತಿದೆ ಎಂಬುದರ ಮೇಲೆ ನಾವು ನಿಗಾ ಇಟ್ಟಿದ್ದೇವೆ’’ ಎಂದರು.

ಈ ಬಿಕ್ಕಟ್ಟು ನಿವಾರಣೆಯಲ್ಲಿ ತೊಡಗಿಸಿಕೊಳ್ಳಲು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಯಾಕೆ ಅಷ್ಟೊಂದು ಆಸಕ್ತರಾಗಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ನಿಯಮಗಳಂತೆ ನಾನು ಈ ನಿರ್ದಿಷ್ಟ ವಿಷಯದ ಬಗ್ಗೆ ಮಾತನಾಡುವಂತಿಲ್ಲ. ಆದರೆ, ಸಂಘರ್ಷ ನೆಲೆಸಿರುವ ಯಾವುದೇ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಲು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಯಾವಾಗಲೂ ಲಭ್ಯರಿರುತ್ತಾರೆ’’ ಎಂದರು.

 ‘‘ಯಾವುದೇ ಪ್ರಕರಣದಲ್ಲಿ, ಒಂದಕ್ಕಿಂತ ಹೆಚ್ಚು ಪಕ್ಷಗಳಿದ್ದರೆ, ವಿಶ್ವಸಂಸ್ಥೆಯ ಮಧ್ಯಸ್ಥಿಕೆಗೆ ಎಲ್ಲರೂ ಒಪ್ಪಬೇಕು’’ ಎಂದು ಡುಜರಿಕ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News