ಸಂಸ್ಕೃತ ಭಾಷೆಗೆ ವೈದಿಕ, ಬೌದ್ಧ, ಜೈನರ ಕೊಡುಗೆ ಅಪಾರ: ಅಮೃತೇಶ ಆಚಾರ್ಯ

Update: 2018-01-23 17:39 GMT

ಪುತ್ತೂರು, ಜ. 23: ಸಂಸ್ಕೃತವು ಒಂದು ಧಾತು ಜನ್ಯವಾದ ಪ್ರಾಚೀನ ಭಾಷೆಯಾಗಿದೆ. ಈ ಭಾಷೆಯಲ್ಲಿ ಕ್ರಿಯೆಯನ್ನು ಆಧರಿಸಿ ಶಬ್ದಗಳ ಉತ್ಪತ್ತಿಯಾಗಿದೆ. ಈ ಭಾಷೆಯ ಬೆಳವಣಿಗೆಯಲ್ಲಿ ವೈದಿಕರು, ಬೌದ್ಧರು, ಜೈನರು ಇತ್ಯಾದಿ ಎಲ್ಲಾ ಜನಾಂಗದವರು ಯಾವುದೇ ಸಂಕುಚಿತ ಮನೋಭಾವನೆಯಿಲ್ಲದೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ಉಡುಪಿಯ ಸಂಸ್ಕೃತ ಕಾಲೇಜಿನ ಅಲಂಕಾರ ಶಾಸ್ತ್ರ ಪ್ರಾಧ್ಯಾಪಕರಾದ ವಿದ್ವಾನ್ ಅಮೃತೇಶ ಆಚಾರ್ಯ ಅವರು ಹೇಳಿದರು.

ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಮಂಗಳವಾರ ನಡೆದ ’ಸಂಸ್ಕೃತೋತ್ಸವ’- ಪ್ರಾಚೀನ ಭಾರತೀಯ ವಿಜ್ಞಾನ ವೈಭವ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಂಸ್ಕೃತವು ಹುಟ್ಟಿದ ಭಾಷೆಯಲ್ಲ. ಅದೊಂದು ದೈವೀ ಭಾಷೆ. ಅದರ ಮೂಲವನ್ನು ಹುಡುಕಲು ಸಾಧ್ಯವಿಲ್ಲ. ಅದು ಸುಮಾರು ಆರು ಸಾವಿರ ವರ್ಷಗಳ ಹಿಂದೆ ಋಗ್ವೇದದ ಕಾಲದಲ್ಲಿಯೇ ಇತ್ತು ಎಂದು ಒಪ್ಪಲಾಗಿದೆ. ಯಾವ ಭಾಷೆಯು ಸಾರವಾಗಿದೆಯೋ ಅಂತಹ ಭಾಷೆಯು ದೀರ್ಘವಾಗಿ ಉಳಿಯಬಲ್ಲುದು. ಸಂಸ್ಕೃತ ಭಾಷೆಯು ಯಾವುದೇ ರೀತಿಯಲ್ಲಿ ವಿಕಾರತೆಗೊಂಡಿಲ್ಲ. ಇದರಲ್ಲಿ ಮುಖ್ಯವಾಗಿ ವೇದಾದಿ ಶಾಸ್ತ್ರಗಳು, ಪುರಾಣಗಳು, ಕಾವ್ಯಗಳು ಎಂಬ ಪ್ರಬೇಧಗಳಿವೆ. ವಿಶಿಷ್ಟ ಪರಂಪರೆಯುಳ್ಳ ಸಂಸ್ಕೃತ ಭಾಷೆಯ ಅಧ್ಯಯನಕ್ಕೆ ಶಿಕ್ಷಣ ಸಂಸ್ಥೆಗಳು ಯಾವುದೇ ಕೀಳರಿಮೆಯಿಲ್ಲದೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಲಿಯೋ ನೊರೊನ್ಹಾ ಅವರು ಮಾತನಾಡಿ, ಭವ್ಯ ಪರಂಪರೆಯುಳ್ಳ ಸಂಸ್ಕೃತ ಭಾಷೆಗೆ ವಿಶ್ವ ಮಟ್ಟದಲ್ಲಿಯೇ ಶ್ರೇಷ್ಟ ಮಟ್ಟದ ಮನ್ನಣೆಯಿದ್ದು,ಸಂಸ್ಕೃತ ಭಾಷೆಯ ಬಗ್ಗೆ ಇನ್ನಷ್ಟು ಸಂಶೋಧನೆ ಕೈಗೊಳ್ಳುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ಆಲ್ಫ್ರೆಡ್ ಜೆ ಪಿಂಟೊ ಅವರು ಮಾತನಾಡಿ, ಭಾಷೆಯ ಮೂಲಕ ಸಂಬಂಧ, ನಡೆ ನುಡಿ ಬೆಳೆಯುತ್ತದೆ. ನಾವು ಮಾತೃ ಭಾಷೆಗೆ ಪ್ರಾಧಾನ್ಯತೆ ಕೊಡುವಂತೆ ಶಾಲಾ ಕಾಲೇಜುಗಳಲ್ಲಿ ರಾಜ್ಯ ಭಾಷೆ, ರಾಷ್ಟ್ರ ಭಾಷೆಯ ಬೆಳವಣಿಗೆಗಳಿಗೂ ಸೂಕ್ತ ಪ್ರೊತ್ಸಾಹ ನೀಡುವ ಅಗತ್ಯವಿದೆ ಎಂದರು. ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ವಿದ್ವಾನ್ ಸುರೇಶ್ ಕುಮಾರ್ ಸ್ವಾಗತಿಸಿದರು. ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಕೆ ವಿಘ್ನೇಶ ಶರ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ದೀಕ್ಷಿತಾ ವಂದಿಸಿದರು. ಸೌಮ್ಯ ಪಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News