ವಾಹನ ಬ್ಯಾಡ್ಜ್‌ಗೆ ಶೈಕ್ಷಣಿಕ ಮಾನದಂಡ ಸರಿಯೇ?

Update: 2018-01-23 18:18 GMT

ಮಾನ್ಯರೇ,

ಹಳದಿ ಬಣ್ಣದ ಪಲಕದ ಸಾರಿಗೆ ವಾಹನಗಳನ್ನು ಓಡಿಸುವ ಚಾಲಕರಿಗೆ ಬ್ಯಾಡ್ಜ್ ಕಡ್ಡಾಯವಾಗಿದ್ದು, ಇದರೊಂದಿಗೆ ಬ್ಯಾಡ್ಜ್ ಹೊಂದಲು ಎಂಟನೇ ತರಗತಿ ಶೈಕ್ಷಣಿಕ ಅರ್ಹತೆಯನ್ನೂ ಕಡ್ಡಾಯ ಮಾಡಲಾಗಿದೆ. ಸಾರಿಗೆ ಇಲಾಖೆಯ ಈ ನಿಯಮವು ಸ್ವ-ಉದ್ಯೋಗದ ಕನಸು ಕಾಣುವ ಹಲವು ಶಿಕ್ಷಣ ವಂಚಿತರಿಗೆ ಸಮಸ್ಯೆಯನ್ನು ತಂದೊಡ್ಡಿದೆ.

ಕುಟುಂಬದ ಆರ್ಥಿಕ ಪರಿಸ್ಥಿತಿ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಹಿಂದೆಲ್ಲಾ ಹೆಚ್ಚಿನ ಮಂದಿ ಅರ್ಧಕ್ಕೆ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದರು. ಹಾಗಾಗಿ ಎಂಟನೇ ತರಗತಿಯವರೆಗೆ ಶಾಲೆಗೆ ಹೋಗದವರು ಅದೆಷ್ಟೋ ಜನರಿದ್ದಾರೆ. ಸ್ವ-ಉದ್ಯೋಗದ ಕನಸು ಕಾಣುವ, ದೊಡ್ಡ ಬಂಡವಾಳ ಹಾಕಿ ಸ್ವಂತ ಉದ್ಯಮ ನಡೆಸಲು ಶಕ್ತರಲ್ಲದ ಮಂದಿ ನೆಚ್ಚಿಕೊಳ್ಳುವುದು ಸಾರಿಗೆ ವಾಹನಗಳನ್ನು ಚಾಲನೆ ಮಾಡುವುದು. ಆಟೊ ರಿಕ್ಷಾ, ಟ್ಯಾಕ್ಸಿ ಸೇರಿದಂತೆ ಇನ್ನಿತರ ವಾಹನಗಳನ್ನು ಬ್ಯಾಂಕ್‌ಗಳಲ್ಲಿ ಸಾಲ ಪಡೆದೋ ಅಥವಾ ಇತರ ಮೂಲಗಳಿಂದ ಹಣ ಹೊಂದಿಸಿಕೊಂಡು, ಯಾರದೇ ಹಂಗಿಲ್ಲದೆ ನಿಯತ್ತಿನಿಂದ ದುಡಿದು ತಿನ್ನುವ ಕನಸು ಕಾಣುತ್ತಾರೆ. ಆದರೆ ಅಂತಹವರ ಕನಸಿಗೆ ಸಾರಿಗೆ ಇಲಾಖೆಯ ಈ ನಿಯಮ ಕೊಡಲಿ ಪೆಟ್ಟು ನೀಡಿದಂತಾಗಿದೆ.

ಸಾರಿಗೆ ವಾಹನಗಳನ್ನು ಓಡಿಸುವವರು ಹೆಚ್ಚಾಗಿ ಶಿಕ್ಷಣ ವಂಚಿತರೇ, ಉನ್ನತ ಶಿಕ್ಷಣ ಪಡೆದವರು ಇನ್ನಿತರ ಉದ್ಯೋಗ ಹುಡುಕುತ್ತಾರೆ. ಮೊದಲೇ ನಮ್ಮಲ್ಲಿ ಉದ್ಯೋಗದ ಕೊರತೆಯಿದ್ದು, ಹಲವು ಮಂದಿ ಉದ್ಯೋಗವಂಚಿತರಾಗಿದ್ದಾರೆ. ಕೆಲವರು ಉದ್ಯೋಗವಿಲ್ಲದೆ ಕಾನೂನು ಬಾಹಿರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಾರಿಗೆ ಇಲಾಖೆಯು ಶೈಕ್ಷಣಿಕ ಅರ್ಹತೆಯ ನಿಯಮವನ್ನು ಬದಲಾಯಿಸಿ, ಪರವಾನಿಗೆ ಪಡೆದು ಕಾನೂನುಬದ್ಧವಾಗಿ ಸಾರಿಗೆ ವಾಹನಗಳನ್ನು ಓಡಿಸುವವರಿಗೆ ಶೈಕ್ಷಣಿಕ ಮಾನದಂಡಕ್ಕೆ ಒತ್ತಾಯಿಸದೆ ಬ್ಯಾಡ್ಜ್ ನೀಡಿದರೆ ಸಾವಿರಾರು ನಿರುದ್ಯೋಗಿಗಳು ಉದ್ಯೋಗ ಹೊಂದಲು ಅವಕಾಶವಾಗುತ್ತದೆ.

-ಖಲಂದರ್ ಶಾಫಿ, ನೆಕ್ಕಿಲಾಡಿ

Writer - -ಖಲಂದರ್ ಶಾಫಿ, ನೆಕ್ಕಿಲಾಡಿ

contributor

Editor - -ಖಲಂದರ್ ಶಾಫಿ, ನೆಕ್ಕಿಲಾಡಿ

contributor

Similar News