ಸರಕಾರಿ ಬಸ್ಸುಗಳಿಂದ ಅನಾರೋಗ್ಯಕರ ಸ್ಪರ್ಧೆ: ಖಾಸಗಿ ಬಸ್ಸು ಮಾಲಕರ ಅಸಮಾಧಾನ

Update: 2018-01-23 18:35 GMT

ಮಂಗಳೂರು, ಜ. 23: ಕಳೆದ ಹಲವು ದಶಕಗಳಿಂದ ನಗರದಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆಯನ್ನು ನೀಡುತ್ತಿರುವ ಖಾಸಗಿ ಬಸ್ಸುಗಳ ವಿರುದ್ಧ ಸರಕಾರಿ ಬಸ್ಸುಗಳು ಅನಾರೋಗ್ಯಕರ ಸ್ಪರ್ಧೆ ನೀಡುತ್ತಿದ್ದು, ಇದರಿಂದ ಖಾಸಗಿ ಬಸ್ಸು ಮಾಲಕರು ಉದ್ಯಮವನ್ನು ಕಳೆದುಕೊಳ್ಳುವ ಭೀತಿಯನ್ನು ಎದುರಿಸುತ್ತಿದ್ದಾರೆ ಎಂದು ದ.ಕ. ಬಸ್ಸು ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಹೇಳಿದ್ದಾರೆ.

ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಡೀಸೆಲ್ ದರವು ನಿರಂತರವಾಗಿ ಏರಿಕೆಯಾಗುತ್ತಿದೆ. ಅಲ್ಲದೆ, ಇನ್ಸೂರೆನ್ಸ್ ಪ್ರೀಮಿಯಂ, ಚಾಸಿಸ್, ಬಸ್ಸು ಕವಚ ನಿರ್ಮಾಣ, ಆಯಿಲ್ ದರ, ಬಸ್ಸಿನ ಬಿಡಿ ಭಾಗಗಳು, ಟಯರ್ ರೀಸೋಲ್, ಗ್ಯಾರೇಜು ವೆಚ್ಚ ಮೊದಲಾದವುಗಳ ವೆಚ್ಚ ಏರಿಕೆಯಾಗುತ್ತಿರುವುದರಿಂದ ಬಸ್ಸುಗಳ ನಿರ್ವಹಣೆ ಕಷ್ಟ ಸಾಧ್ಯವಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಇದೀಗ ಕೆಲವಡೆಗಳಲ್ಲಿ ಕೆಎಸ್ಸಾರ್ಟಿಸಿಯವರು ಖಾಸಗಿ ಬಸ್ಸುಗಳಿಗೆ ಅನಾರೋಗ್ಯಕರವಾಗಿ ಸ್ಪರ್ಧೆ ನೀಡುವುದು ಸರಿಯಲ್ಲ. ಇದರಿಂದ ಖಾಸಗಿ ಬಸ್ಸು ಮಾಲಕರ ಉದ್ಯಮ ಕಳೆದುಕೊಳ್ಳುವ ಭೀತಿ ಆವರಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸುಚೇತನ್ ಜಿ. ಕಾವೂರು, ಉಪಾಧ್ಯಕ್ಷ ಬಿ.ಪಿ.ದಿವಾಕರ್, ಜೊತೆ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಎ.ಕೆ.ಜಯರಾಮ ಶೇಖ, ಜಿ.ಶಶಿಧರ್ ಶೆಟ್ಟಿ, ಭಾಸ್ಕರ್ ಅಮೀನ್, ಜಯಶೀಲ ಅಡ್ಯಂತಾಯ, ವಿ.ಕೆ.ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News