ಬುಡಕಟ್ಟು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ,ದೂರು ಸಲ್ಲಿಸದಂತೆ ಬೆದರಿಕೆ

Update: 2018-01-24 15:17 GMT

ಹರ್ದಾ(ಮ.ಪ್ರ),ಜ.24: ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಹರ್ದಾದಾದು ಗ್ರಾಮದಲ್ಲಿ 11ನೇ ತರಗತಿಯ ವಿದ್ಯಾರ್ಥಿನಿಯಾಗಿರುವ 16ರ ಹರೆಯದ ಬುಡಕಟ್ಟು ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಜಿ ಮಾಡಿಕೊಳ್ಳುವಂತೆ ಮತ್ತು ಪೊಲೀಸ್ ದೂರು ಸಲ್ಲಿಸದಂತೆ ಸ್ಥಳೀಯರು ಬಾಲಕಿಗೆ ಮತ್ತು ಆಕೆಯ ಕುಟುಂಬಕ್ಕೆ ಬೆದರಿಕೆಯನ್ನೊಡ್ಡಿದ್ದರು ಎಂದು ಆರೋಪಿಸ ಲಾಗಿದೆ.

ಕೆಲವು ಬಂಧುಗಳ ನೆರವಿನೊಂದಿಗೆ ಬಾಲಕಿ ಕೊನೆಗೂ ಮಂಗಳವಾರ ಸಂಜೆ ನೆರೆಯ ಹರ್ದಾ ನಗರವನ್ನು ತಲುಪಿ ತನ್ನ ಮೇಲೆ ನಡೆದ ದೌರ್ಜನ್ಯದ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾಳೆ ಎಂದು ಎಸ್‌ಪಿ ರಾಜೇಶಕುಮಾರ ಸಿಂಗ್ ಬುಧವಾರ ಇಲ್ಲಿ ತಿಳಿಸಿದರು.

ಜ.11ರಂದು 22ರಿಂದ 30 ವರ್ಷ ವಯೋಮಾನದ ಐವರು ಯುವಕರು ಶಾಲೆಗೆ ಬಿಡುವುದಾಗಿ ಹೇಳಿ ಬಾಲಕಿಯನ್ನು ತಮ್ಮ ಬೈಕ್‌ಗಳಲ್ಲಿ ಹತ್ತಿಸಿಕೊಂಡಿದ್ದರು. ಬಳಿಕ ನಿರ್ಜನ ಸ್ಥಳಕ್ಕೆ ಕರೆದೊಯ್ದು, ಮತ್ತು ಬರಿಸುವ ಪಾನೀಯವನ್ನು ಕುಡಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದರು.

ಮನೆಗೆ ತಲುಪಿದ ಬಳಿಕ ಬಾಲಕಿ ತನ್ನ ಮೇಲೆ ದೌರ್ಜನ್ಯ ನಡೆದಿದ್ದನ್ನು ಹೇಳಿಕೊಂಡಿದ್ದಳು. ಕುಟುಂಬದವರು ಪೊಲೀಸ್ ದೂರು ಸಲ್ಲಿಸಲು ಮುಂದಾದಾಗ ಗ್ರಾಮಸ್ಥರು ಪಂಚಾಯತಿ ಸಭೆಯನ್ನು ನಡೆಸಿ ರಾಜಿ ಮಾಡಿಕೊಂಡು ಹಣ ಪಡೆದುಕೊಳ್ಳುವಂತೆ ತಾಕೀತು ಮಾಡಿದ್ದರು ಮತ್ತು ಪೊಲೀಸ್ ದೂರು ಸಲ್ಲಿಸದಂತೆ ಜೀವ ಬೆದರಿಕೆಯನ್ನೊಡ್ಡಿದ್ದರು. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News