ಥಿಯೇಟರ್‌ಗಳಲ್ಲಿ ಹೊರಗಿನ ಆಹಾರಕ್ಕೆ ಅವಕಾಶ ಕುರಿತು ನಿರ್ಧಾರ ಕೈಗೊಳ್ಳಲು ಸರಕಾರಕ್ಕೆ ಸೂಚನೆ

Update: 2018-01-25 13:11 GMT

ಮುಂಬೈ,ಜ,25: ಮಲ್ಟಿಪ್ಲೆಕ್ಸ್‌ಗಳ ಸಂಘಗಳಿಂದ ಸಲಹೆಗಳನ್ನು ಪಡೆದುಕೊಳ್ಳುವಂತೆ ಮತ್ತು ಸಿನಿಮಾ ವೀಕ್ಷಕರು ಥಿಯೇಟರ್‌ಗಳಿಗೆ ತಮ್ಮದೇ ಆಹಾರವನ್ನು ಒಯ್ಯಲು ಅನುಮತಿ ನೀಡುವ ಕುರಿತು ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ಮಹಾರಾಷ್ಟ್ರ ಸರಕಾರಕ್ಕೆ ನಿರ್ದೇಶ ನೀಡಿದೆ.

ಜನರು ಥಿಯೇಟರ್‌ಗಳಿಗೆ ಹೊರಗಿನಿಂದ ಆಹಾರವನ್ನು ಒಯ್ಯಲು ಅನುಮತಿ ಕೋರಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿರುವ ಜೈನೇಂದ್ರ ಬಕ್ಷಿ ಅವರು ಈಗಾಗಲೇ ಸಲ್ಲಿಸಿರುವ ಸಲಹೆಗಳನ್ನೂ ಪರಿಶೀಲಿಸುವಂತೆ ನ್ಯಾಯಾಧೀಶರಾದ ಆರ್.ಎಂ.ಬೋರ್ಡೆ ಮತ್ತು ರಾಜೇಶ ಕೇತ್ಕರ್ ಅವರ ಪೀಠವು ರಾಜ್ಯ ಗೃಹ ಇಲಾಖೆಗೆ ಆದೇಶಿಸಿತು. ಥಿಯೇಟರ್‌ಗಳಿಗೆ ಹೊರಗಿನಿಂದ ಆಹಾರಗಳನ್ನು ಒಯ್ಯುವುದನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

ಥಿಯೇಟರ್‌ಗಳು ಮತ್ತು ಸಭಾಂಗಣಗಳಲ್ಲಿ ಆಹಾರವಸ್ತುಗಳ ಮಾರಾಟವನ್ನು ಮಹಾರಾಷ್ಟ್ರ ಚಿತ್ರಮಂದಿರಗಳ(ನಿಯಂತ್ರಣ) ನಿಯಮಗಳಡಿ ನಿಷೇಧಿಸಲಾಗಿದೆ ಎಂದು ಬಕ್ಷಿ ಪರ ವಕೀಲ ಆದಿತ್ಯ ಪ್ರತಾಪ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಅರ್ಜಿದಾರರು ಮಂಡಿಸಿರುವ ಬೇಡಿಕೆಯು ಮಲ್ಟಿಪ್ಲೆಕ್ಸ್ ಮಾಲಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ತನಗೆ ಅವಕಾಶ ನೀಡಬೇಕು ಎಂದು ಫಿಕ್ಕಿ ಮಲ್ಟಿಪ್ಲೆಕ್ಸ್ ಮಾಲಕರ ಸಂಘವು ನ್ಯಾಯಾಲಯವನ್ನು ಕೋರಿಕೊಂಡಿತು.

ಎಲ್ಲ ಪಕ್ಷಗಳು ಸಲ್ಲಿಸಿರುವ ಸಲಹೆಗಳನ್ನು ಪರಿಶೀಲಿಸಿ ನಿರ್ಧಾರವೊಂದನ್ನು ಕೈಗೊಳ್ಳಲು ತಾನು ಸಿದ್ಧವಿರುವುದಾಗಿ ತಿಳಿಸಿದ ರಾಜ್ಯ ಸರಕಾರವು, ಅದಕ್ಕಾಗಿ ಎರಡು ವಾರಗಳ ಕಾಲಾವಕಾಶವನ್ನು ಕೋರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News