‘ಪದ್ಮಾವತ್’ ಹಿಂಸಾಚಾರಕ್ಕೆ ಬಿಜೆಪಿಯ ಪಕೋಡ ರಾಜಕೀಯವೇ ಕಾರಣ: ಉವೈಸಿ

Update: 2018-01-25 13:26 GMT

ಹೈದರಾಬಾದ್, ಜ.25: ಸದ್ಯ ‘ಪದ್ಮಾವತ್’ ಸಿನೆಮಾವನ್ನು ವಿರೋಧಿಸಿ ಉತ್ತರದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಬಿಜೆಪಿಯ ಪಕೋಡ ರಾಜಕೀಯವೇ ಕಾರಣವೆಂದು ಎಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಉವೈಸಿ ಆರೋಪಿಸಿದ್ದಾರೆ.

ಡಾವೋಸ್‌ನಲ್ಲಿ ಪ್ರಧಾನಿ ಮೋದಿ ನಾವು ಕೆಂಪು ಪಟ್ಟಿಯನ್ನು ತೆಗೆದು ಕೆಂಪು ಹಾಸನ್ನು ಹಾಸಿದ್ದೇವೆ ಎಂದು ಹೇಳುತ್ತಾರೆ. ಆದರೆ ಅವರು ಕೆಂಪು ಹಾಸನ್ನು ಹಾಸಿರುವುದು ಹಿಂಸಾಚಾರ ನಡೆಸುವವರಿಗೆ. ಈ ಗಲಭೆಯಲ್ಲಿ ಮಕ್ಕಳು ಗಾಯಗೊಂಡಿದ್ದಾರೆ, ಸಾರ್ವಜನಿಕ ಸೊತ್ತುಗಳಿಗೆ ಹಾನಿಯಾಗಿದೆ. ಇದೆಲ್ಲವೂ ಬಿಜೆಪಿಯ ಬೆಂಬಲದಿಂದಲೇ ನಡೆಯುತ್ತಿದೆ ಎಂದು ಉವೈಸಿ ಆರೋಪಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವವರೆಲ್ಲರು ಉದ್ಯೋಗವಿಲ್ಲದೆ ಮಾಡಲು ಏನೂ ಕೆಲಸವಿಲ್ಲದ ಯುವಕರಾಗಿದ್ದಾರೆ ಎಂದು ಹೇಳಿರುವ ಉವೈಸಿ, ಪ್ರಧಾನಿ ಮೋದಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಯಾರ ಅಭಿಪ್ರಾಯವನ್ನೂ ಕೇಳದೆ, ಯಾವ ಸಾರ್ವಜನಿಕ ಚರ್ಚೆಯನ್ನು ನಡೆಸದೆ ಅವರು ತ್ರಿವಳಿ ತಲಾಕ್ ಅನ್ನು ನಿಷೇಧಿಸಲು ಮುಂದಾಗಿದ್ದಾರೆ. ಆದರೆ ಭಾವನೆಗಳನ್ನು ತೃಪ್ತಿಪಡಿಸುವ ಸಲುವಾಗಿ ಈ ಸಿನೆಮಾದ ಹೆಸರು ಬದಲಾವಣೆ ಮಾಡಲಾಗಿದೆ, ದೃಶ್ಯಗಳನ್ನು ತೆಗೆದುಹಾಕಲಾಗಿದೆ. ಯಾವ ರೀತಿಯ ರಾಜಕೀಯವನ್ನು ಇವರು ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ಕಾನೂನಿನ ನಿಯಮವಿಲ್ಲ ಎಂದು ಉವೈಸಿ ಕಿಡಿಕಾರಿದ್ದಾರೆ.

ಆರಂಭದಲ್ಲಿ ಪದ್ಮಾವತಿ ಎಂದು ಹೆಸರಿಡಲಾಗಿದ್ದ ಪದ್ಮಾವತ್ ಸಿನೆಮಾದ ಚಿತ್ರೀಕರಣ ಆರಂಭವಾದಂದಿನಿಂದ ಈ ಬಗ್ಗೆ ಪ್ರತಿಭಟನೆಗಳು ನಡೆಯುತ್ತಲೇ ಇದೆ. ಚಿತ್ರೀಕರಣದ ವೇಳೆ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿಯವರ ಮೇಲೆ ಕರ್ಣಿ ಸೇನೆಯ ಕಾರ್ಯಕರ್ತರು ಹಲ್ಲೆ ನಡೆಸಿದ ಪ್ರಕರಣವೂ ನಡೆದಿದೆ. ಸಿನೆಮಾದ ಟ್ರೈಲರ್ ಬಿಡುಗಡೆಯಾದ ನಂತರ ಪ್ರತಿಭಟನೆಯು ಮತ್ತಷ್ಟು ತೀವ್ರಗೊಂಡು ಇದೀಗ ಕರ್ಣಿ ಸೇನೆಯ ಕಾರ್ಯಕರ್ತರು ರಾಜಸ್ಥಾನ, ಹರ್ಯಾಣ, ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಬೀದಿಗಿಳಿದು ಹಿಂಸಾಚಾರ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News