ಒಡಿಶಾ: ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಬಾಲಕಿ ಆತ್ಮಹತ್ಯೆ

Update: 2018-01-25 14:24 GMT

ಭುವನೇಶ್ವರ, ಜ.25: ಸಾಮೂಹಿಕ ಅತ್ಯಾಚಾರ ನಡೆಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪೊಲೀಸರು ನಿಷ್ಕ್ರಿಯತೆ ತೋರಿದ್ದಾರೆ ಎಂಬ ಕಾರಣದಿಂದ ಮನನೊಂದ ಸಂತ್ರಸ್ತೆ, ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಒಡಿಶಾದಲ್ಲಿ ಕಳೆದ ಮೂರು ದಿನದಲ್ಲಿ ಈ ರೀತಿ ನಡೆದ ಎರಡನೇ ಘಟನೆ ಇದಾಗಿದೆ. ಖುರ್ದಾ ಜಿಲ್ಲೆಯ ನಿವಾಸಿ , 10ನೇ ತರಗತಿಯ ವಿದ್ಯಾರ್ಥಿನಿ ತನ್ನನ್ನು ಪ್ರೀತಿಸಲು ನಿರಾಕರಿಸಿದ್ದಾಳೆ ಎಂಬ ಸಿಟ್ಟಿನಿಂದ ಆಕೆಯ ನೆರೆಮನೆಯ 22 ವರ್ಷದ ಯುವಕ ನಿಮೈ ಪಾಲೈ ಎಂಬಾತ ಡಿ.31ರಂದು ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಘಟನೆಯ ಕುರಿತು ಆಕೆಯ ತಂದೆ ಸ್ಥಳೀಯರಲ್ಲಿ ತಿಳಿಸಿದ್ದು ಮರುದಿನ ಬೆಳಿಗ್ಗೆ ಬಾಣಾಪುರ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಆದರೆ ನಾಲ್ಕು ವಾರ ಕಳೆದರೂ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ವಿಫಲರಾಗಿದ್ದಾರೆ.

ಈ ಮಧ್ಯೆ, ಗ್ರಾಮಸ್ಥರು ತನ್ನ ಬಗ್ಗೆ ಆಡುತ್ತಿರುವ ಗಾಳಿಸುದ್ದಿಯಿಂದ ಮನನೊಂದ ಬಾಲಕಿ ಬುಧವಾರ ಕೀಟನಾಷಕ ಸೇವಿಸಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಬಾಲಕಿಯ ಮೃತದೇಹವನ್ನು ಬಾಣಾಪುರ್ ಠಾಣೆಯ ಮುಂದೆ ಇರಿಸಿ ಸ್ಥಳೀಯರು ಪ್ರತಿಭಟನೆ ನಡೆಸಿ ಆರೋಪಿಯನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿದ್ದಾರೆ. ಪೊಲೀಸರು ಸಂತ್ರಸ್ತ ಬಾಲಕಿಯ ಹೇಳಿಕೆ ದಾಖಲಿಸಿಕೊಂಡಿದ್ದು ಶೀಘ್ರ ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದರು.

 ಇನ್ನೊಂದು ಘಟನೆ ಕೋರಾಪಟ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ಮೇಲೆ ನಾಲ್ವರು ‘ಕೋಬ್ರ’ ಯೋಧರು ಅತ್ಯಾಚಾರ ನಡೆಸಿದ್ದಾರೆ ಎಂದು ದೂರಿದ್ದ ಅಪ್ರಾಪ್ತ ಬಾಲಕಿ, ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿಯ ಹೇಳಿಕೆ ಸುಳ್ಳೆಂದು ಸಿಐಡಿ ತನಿಖೆಯ ಬಳಿಕ ತಿಳಿದುಬಂದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

 ವೈದ್ಯಕೀಯ ಪರೀಕ್ಷೆಯ ಬಳಿಕ ಬಾಲಕಿಯ ಆರೋಪ ಸುಳ್ಳೆಂದು ಸಾಬೀತಾಗಿದೆ. ಈಕೆಗೆ 16ರ ಹರೆಯದ ಬಾಲಕನೊಂದಿಗೆ ಪ್ರೇಮ ಸಂಬಂಧವಿತ್ತು. ಕಳೆದ ಅ.10ರಂದು ಬಾಲಕನನ್ನು ಭೇಟಿ ಮಾಡಿದ್ದ ಬಾಲಕಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ. ಆದರೆ ಇದನ್ನು ಬಾಲಕ ನಿರಾಕರಿಸಿದಾಗ ತನ್ನ ಸಮವಸ್ತ್ರವನ್ನು ಹರಿದುಕೊಂಡು , ನೀನು ಅತ್ಯಾಚಾರ ಮಾಡಿದ್ದೀ ಎಂದು ಗುಲ್ಲೆಬ್ಬಿಸುವುದಾಗಿ ಹೆದರಿಸಿದಾಗ ಆ ಬಾಲಕ ಒಪ್ಪಿದ್ದಾನೆ. ಬಳಿಕ ಆಕೆ, ತನ್ನನ್ನು ನಾಲ್ವರು ‘ಕೋಬ್ರಾ’ ಯೋಧರು ಅತ್ಯಾಚಾರ ನಡೆಸಿದ್ದಾರೆ ಎಂದು ಸುಳ್ಳು ದೂರು ನೀಡಿದ್ದಳು . ಈ ಕುರಿತು ಅಪ್ರಾಪ್ತ ಬಾಲಕ ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ . ಬಾಲಕಿಯ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎಂದು ಸಾಬೀತಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾನು ನೀಡಿದ್ದ ದೂರು ಸುಳ್ಳೆಂದು ಎಲ್ಲರಿಗೂ ತಿಳಿಯುತ್ತದೆ ಎಂಬ ಅಪಮಾನದಿಂದ ಆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣದಲ್ಲಿ ಹರ್ಯಾಣ ಮೂರನೇ ಸ್ಥಾನದಲ್ಲಿದ್ದು ದಿಲ್ಲಿ ಹಾಗೂ ಅಸ್ಸಾಂ ಮೊದಲ ಎರಡು ಸ್ಥಾನದಲ್ಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News