ವಿಕಲಚೇತನರ ಹಕ್ಕು ಕುರಿತ ಕಾಯ್ದೆ ಜಾರಿಗೆ ರಾಜ್ಯಗಳಿಗೆ ಸುಪ್ರೀಂ ಸೂಚನೆ

Update: 2018-01-25 14:46 GMT

ಹೊಸದಿಲ್ಲಿ, ಜ.25: ವಿಕಲಚೇತನ ವ್ಯಕ್ತಿಗಳ ಹಕ್ಕು ಕುರಿತ ಕಾಯ್ದೆಯನ್ನು ಮೂರು ತಿಂಗಳೊಳಗೆ ಜಾರಿಗೊಳಿಸುವಂತೆ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ ಸೂಚಿಸಿದೆ.

ವಿಕಲಚೇತನ ವ್ಯಕ್ತಿಗಳ ಹಕ್ಕು ಕಾಯ್ದೆ -2016ನ್ನು ಪಾಲಿಸುವಂತೆ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಎಸ್.ಅಬ್ದುಲ್ ನಝೀರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿತು. ವಿಕಲಚೇತನರ ಹಕ್ಕು ಕಾಯ್ದೆಯ ಅನುಷ್ಠಾನಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ನ್ಯಾಯಮೂರ್ತಿ ಸುನಂದಾ ಭಂಡಾರೆ ಪ್ರತಿಷ್ಠಾನ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭ ನ್ಯಾಯಪೀಠ ಈ ಸೂಚನೆ ನೀಡಿದೆ.

ವಿಚಾರಣೆ ಸಂದರ್ಭ ಪ್ರತಿಷ್ಠಾನದ ಪರ ವಕೀಲರಾದ ಮನಾಲಿ ಸಿಂಘಾಲ್, ವಿಕಲಚೇತನರ ಹಕ್ಕು ಕಾಯ್ದೆ 1995ನ್ನು ಪಾಲಿಸಲು ತಾವು ಬದ್ಧರೆಂದು ಉ.ಪ್ರದೇಶ, ಕರ್ನಾಟಕ, ಹರ್ಯಾಣ, ಉತ್ತರಾಖಂಡ ಮತ್ತು ಲಕ್ಷದ್ವೀಪ ಅಫಿಧಾವಿತ್ ಸಲ್ಲಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆದರೆ 2016ರ ಕಾಯ್ದೆಯ ಪಾಲನೆಯ ಬಗ್ಗೆ ಗಮನ ಹರಿಸಬೇಕು ಎಂದು ನ್ಯಾಯಪೀಠ ತಿಳಿಸಿತು. 1995ರ ಕಾಯ್ದೆಗೆ ಕೆಲವೊಂದು ತಿದ್ದುಪಡಿ ಮಾಡಿ ರೂಪಿಸಲಾಗಿರುವ 2016ರ ಕಾಯ್ದೆಯಲ್ಲಿ ವಿಕಲಚೇತನ ವ್ಯಕ್ತಿಗಳ ಹಕ್ಕಿನ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಆದ್ದರಿಂದ 2016ರ ಕಾಯ್ದೆಯನ್ನು ಪಾಲಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News