×
Ad

‘ಪದ್ಮಾವತ್’ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮಕ್ಕೆ ಉ.ಪ್ರ.ಪೊಲೀಸರಿಗೆ ಆದಿತ್ಯನಾಥ್ ಆದೇಶ

Update: 2018-01-25 20:48 IST

ಲಕ್ನೋ,ಜ.25: ಭಾರೀ ವಿವಾದವನ್ನು ಸೃಷ್ಟಿಸಿರುವ ಬಾಲಿವುಡ್ ಚಿತ್ರ ‘ಪದ್ಮಾವತ್’ ಗುರುವಾರ ದೇಶಾದ್ಯಂತ ಬಿಡುಗಡೆಗೊಂಡಿದೆ. ಉತ್ತರ ಪ್ರದೇಶ ಸರಕಾರವು ಈ ಮೊದಲು ಚಿತ್ರದ ಬಿಡುಗಡೆಗೆ ಅನುಮತಿ ನಿರಾಕರಿಸಿತ್ತಾದರೂ ಇದೀಗ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಚಿತ್ರದ ಪ್ರದರ್ಶನಗಳಿಗೆ ಅಡ್ಡಿಯನ್ನುಂಟು ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ.

ಚಿತ್ರದ ಬಿಡುಗಡೆಯನ್ನು ವಿರೋಧಿಸಿ ಹಿಂಸಾತ್ಮಕ ಪ್ರತಿಭಟನೆಗಳ ಮುಂಚೂಣಿಯಲ್ಲಿರುವ ಕರ್ಣಿ ಸೇನಾ ಪಶ್ಚಿಮ ಉ.ಪ್ರದೇಶದ ಇಟಾವಾ ಮತ್ತು ಫಿರೋಝಾಬಾದ್‌ಗಳಲ್ಲಿ ಪ್ರತಿಭಟನೆಗಳನ್ನು ನಡೆಸಿದೆ. ಲಕ್ನೋದಲ್ಲಿ ಪ್ರತಿಭಟನಾಕಾರರು ಗಂಟೆಗಟ್ಟಲೆ ಪ್ರಸಿದ್ಧ ನಾವೆಲ್ಟಿ ಸಿನಿಮಾದ ಎದುರು ಧರಣಿ ಕುಳಿತು ಚಿತ್ರದ ಪ್ರದರ್ಶನಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು. ಆದರೆ ಸಿನಿಮಾ ಮಂದಿರದ ಮಾಲಕರು ಪ್ರತಿಭಟನಾಕಾರರ ಬೇಡಿಕೆಗೆ ಮಣಿಯಲಿಲ್ಲ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗಳಿಗೆ ಅವಕಾಶವಿದೆ, ಆದರೆ ಕಾನೂನು ಭಂಗಕ್ಕೆ ಯಾರಿಗೂ ಅವಕಾಶವಿಲ್ಲ ಎಂದು ಸರಕಾರವು ರಾಜ್ಯದ ಎಲ್ಲ ಪೊಲೀಸರಿಗೆ ನೀಡಿರುವ ಸೂಚನೆಯಲ್ಲಿ ಸ್ಪಷ್ಟಪಡಿಸಿದೆ.

ಲಕ್ನೋದಲ್ಲಿ ‘ಪದ್ಮಾವತ್’ ಚಿತ್ರವನ್ನು ಪ್ರದರ್ಶಿಸುತ್ತಿರುವ ಚಿತ್ರಮಂದಿರಗಳ ಹೊರಗೆ ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅಗ್ನಿಶಾಮಕ ವಾಹನಗಳನ್ನು ಸನ್ನದ್ಧವಾಗಿರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News