ಡೋಕಾ ಲಾ ಚೀನಾದ ಭಾಗ; ಬಿಕ್ಕಟ್ಟಿನಿಂದ ಪಾಠ ಕಲಿತುಕೊಳ್ಳಿ

Update: 2018-01-25 16:42 GMT

ಬೀಜಿಂಗ್, ಜ. 25: ಡೋಕಾ ಲಾ ವಿವಾದಾಸ್ಪದ ಪ್ರದೇಶವೆಂಬುದಾಗಿ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನೀಡಿರುವ ಹೇಳಿಕೆಯನ್ನು ಚೀನಾ ಸೇನೆ ಗುರುವಾರ ಟೀಕಿಸಿದೆ ಹಾಗೂ ಸಿಕ್ಕಿಂ ಗಡಿ ಸಮೀಪ ಕಳೆದ ವರ್ಷ ಸಂಭವಿಸಿದ ಬಿಕ್ಕಟ್ಟು ಮುಂದೆ ಮರುಕಳಿಸದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿದೆ.

ವಿವಾದಕ್ಕೆ ಸಂಬಂಧಿಸಿ ಭಾರತೀಯ ಸೇನಾ ಮುಖ್ಯಸ್ಥರು ನೀಡಿರುವ ಹೇಳಿಕೆಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಪೀಪಲ್ಸ್ ಲಿಬರೇಶನ್ ಆರ್ಮಿ, ಡೋಕಾ ಲಾ ಚೀನಾದ ಭಾಗವೆಂದು ಪ್ರತಿಪಾದಿಸಿದೆ.

ಭಾರತೀಯ ಪಡೆಗಳು ಡೋಕಾ ಲಾಕ್ಕೆ ಅಕ್ರಮವಾಗಿ ಪ್ರವೇಶಿಸಿವೆ ಎಂಬುದನ್ನು ರಾವತ್‌ರ ಹೇಳಿಕೆಗಳು ತೋರಿಸಿವೆ ಎಂದು ಪಿಎಲ್‌ಎ ಹೇಳಿದೆ.

ಡೋಕಾ ಲಾ ತನಗೆ ಸೇರಿದ್ದು ಎಂದು ಚೀನಾ ಹೇಳುತ್ತಿರುವಂತೆಯೇ, ಅದು ತನಗೆ ಸೇರಿದ್ದು ಎಂಬುದಾಗಿ ಭೂತಾನ್ ಕೂಡ ಹೇಳುತ್ತಿದೆ.

ಈ ವಲಯದಲ್ಲಿ ಚೀನಾ ಕಳೆದ ವರ್ಷ ರಸ್ತೆ ನಿರ್ಮಿಸಲು ಯತ್ನಿಸಿದಾಗ ಭಾರತೀಯ ಸೈನಿಕರು ಡೋಕಾ ಲಾಕ್ಕೆ ನುಗ್ಗಿ ತಡೆದಿದ್ದರು. ಆಗ ಉಭಯ ದೇಶಗಳ ಸೈನಿಕರು ಮುಖಾಮುಖಿಯಾಗಿ ನಿಂತಿದ್ದರು. ಈ ಬಿಕ್ಕಟ್ಟು ಜೂನ್‌ನಿಂದ ಆಗಸ್ಟ್‌ವರಗೆ 73 ದಿನಗಳ ಕಾಲ ಮುಂದುವರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News