ರೊಹಿಂಗ್ಯಾ ಬಿಕ್ಕಟ್ಟು ನಿರ್ವಹಣೆ ಸಮಿತಿಗೆ ಅಮೆರಿಕ ರಾಜತಾಂತ್ರಿಕ ರಾಜೀನಾಮೆ

Update: 2018-01-25 16:48 GMT

ಯಾಂಗನ್ (ಮ್ಯಾನ್ಮಾರ್), ಜ. 25: ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿನ ಕೋಮು ಉದ್ವಿಗ್ನತೆಯನ್ನು ಉಪಶಮನಗೊಳಿಸುವುದಕ್ಕಾಗಿ ಆ ದೇಶದ ನಾಯಕಿ ಆಂಗ್ ಸಾನ್ ಸೂ ಕಿ ರಚಿಸಿದ ಸಮಿತಿಯಿಂದ ಅಮೆರಿಕದ ರಾಜತಾಂತ್ರಿಕ ಬಿಲ್ ರಿಚರ್ಡ್‌ಸನ್ ಗುರುವಾರ ಹೊರಬಂದಿದ್ದಾರೆ ಹಾಗೂ ಈ ಬಿಕ್ಕಟ್ಟಿನಲ್ಲಿ ‘ನೈತಿಕ ನಾಯಕತ್ವದ ಕೊರತೆ’ಗಾಗಿ ಸೂ ಕಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ರಖೈನ್ ರಾಜ್ಯದಲ್ಲಿ ಹಿಂಸೆ ಸ್ಫೋಟಗೊಂಡ ಬಳಿಕ, ಸೇನೆಯ ದಮನ ಕಾರ್ಯಾಚರಣೆಗೆ ಬೆದರಿ 6.5 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ರೊಹಿಂಗ್ಯಾ ಸಾಮೂಹಿಕ ವಲಸೆಯ ಕಾರಣಗಳಿಗೆ ‘ತೇಪೆಹಚ್ಚುವುದಕ್ಕಾಗಿ’ ಮಾತ್ರ ಇರುವ ಈ ಸಮಿತಿಯಲ್ಲಿ ಆತ್ಮಸಾಕ್ಷಿಯೊಂದಿಗೆ ಮುಂದುವರಿಯಲು ತನಗೆ ಸಾಧ್ಯವಿಲ್ಲ ಎಂದು ಹೇಳಿಕೆಯೊಂದರಲ್ಲಿ ಅಮೆರಿಕದ ರಾಜ್ಯವೊಂದರ ಮಾಜಿ ಗವರ್ನರ್ ಹಾಗೂ ಸೂ ಕಿಯ ಒಂದು ಕಾಲದ ಮಿತ್ರನೂ ಆಗಿರುವ ರಿಚರ್ಡ್‌ಸನ್ ಹೇಳಿದ್ದಾರೆ.

ರೊಹಿಂಗ್ಯಾ ಬಿಕ್ಕಟ್ಟಿನ ಬಗ್ಗೆ ವರದಿ ಮಾಡುತ್ತಿದ್ದ ಇಬ್ಬರು ರಾಯ್ಟರ್ಸ್ ಪತ್ರಕರ್ತರ ಬಿಡುಗಡೆ ಸಹಾಯ ಮಾಡುವಂತೆ ಕೋರಿ ತಾನು ಮಾಡಿರುವ ಕರೆಗಳಿಗೆ ಸೂ ಕಿ ‘ಕೋಪದಿಂದ ಪ್ರತಿಕ್ರಿಯಿಸಿದ್ದಾರೆ’ ಎಂಬುದಾಗಿಯೂ ರಿಚರ್ಡ್‌ಸನ್ ಆರೋಪಿಸಿದ್ದಾರೆ.

 ರಖೈನ್ ರಾಜ್ಯದಲ್ಲಿ ಸೇನೆ ನಡೆಸಿದ ದಮನ ಕಾರ್ಯಾಚರಣೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಹೊಂದಿದ ಆರೋಪದಲ್ಲಿ ರಾಯ್ಟರ್ಸ್ ಪತ್ರಕರ್ತರಾದ ವಾ ಲೋನ್ ಮತ್ತು ಕ್ಯಾವ್ ಸೋ ಅವರನ್ನು ಡಿಸೆಂಬರ್‌ನಲ್ಲಿ ಸರಕಾರಿ ರಹಸ್ಯಗಳ ಕಾಯ್ದೆಯಡಿ ಬಂಧಿಸಿರುವುದನ್ನು ಸ್ಮರಿಸಬಹುದಾಗಿದೆ. ಆರೋಪಗಳು ಸಾಬೀತಾದರೆ ಅವರು 14 ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.

ಸಮಿತಿಯಿಂದ ಸರಕಾರದ ‘ಚಿಯರ್‌ಲೀಡರ್’ ಕೆಲಸ

ಈಗಾಗಲೇ, ಲಕ್ಷಾಂತರ ರೊಹಿಂಗ್ಯಾ ನಿರಾಶ್ರಿತರ ಸಾಮೂಹಿಕ ವಲಸೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಟೀಕೆಯನ್ನು ಎದುರಿಸುತ್ತಿರುವ ಸೂ ಕಿ ಸರಕಾರ ರಿಚರ್ಡ್‌ಸನ್ ರಾಜೀನಾಮೆಯಿಂದ ಮತ್ತಷ್ಟು ಮುಖಭಂಗಕ್ಕೀಡಾಗಿದೆ. ದಮನಕ್ಕೊಳಗಾದವರ ರಕ್ಷಕಿ ಎಂಬ ಹೆಗ್ಗಳಿಕೆ ಹೊಂದಿದ್ದ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆಯೂ ಆಗಿರುವ ಸೂ ಕಿಗೆ ಈ ಬೆಳವಣಿಗೆ ಹಿನ್ನಡೆಯಾಗಿದೆ.

‘‘ರಖೈನ್ ರಾಜ್ಯದಲ್ಲಿ ಶಾಂತಿ, ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಖಾತರಿಪಡಿಸಲು ಅತ್ಯಗತ್ಯವಾಗಿ ಬೇಕಾಗಿರುವ ನೈಜ ನೀತಿ ಬದಲಾವಣೆಗಾಗಿ ಕೆಲಸ ಮಾಡುವುದು ಈ ಸಮಿತಿಯ ಉದ್ದೇಶವಾಗಿದೆ. ಆದರೆ, ಅದಕ್ಕೆ ಬದಲಾಗಿ ಸರಕಾರಿ ನೀತಿಗಳನ್ನು ಬೆಂಬಲಿಸುವ ‘ಚಿಯರ್‌ಲೀಡರ್’ ತಂಡವಾಗಿ ಅದು ಕೆಲಸ ಮಾಡುತ್ತಿದೆ’’ ಎಂದು ರಿಚರ್ಡ್‌ಸನ್ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News