ದುಷ್ಕೃತ್ಯವನ್ನು ಮುಸ್ಲಿಮರ ತಲೆಗೆ ಕಟ್ಟಿದ ಮೋದಿ ಅಭಿಮಾನಿ ಮಧು ಕಿಶ್ವರ್ ಗೆ ಟ್ವಿಟರಿಗರ ಮಂಗಳಾರತಿ

Update: 2018-01-26 17:44 GMT

ಹೊಸದಿಲ್ಲಿ, ಜ.26: ‘ಪದ್ಮಾವತ್’ ಚಿತ್ರ ಬಿಡುಗಡೆಯನ್ನು ವಿರೋಧಿಸಿ ಗುರುವಾರ ದೇಶದ ಹಲವೆಡೆ ಹಿಂಸಾಚಾರಗಳು ನಡೆದಿತ್ತು. ಗುರುಗ್ರಾಮ್ ನಲ್ಲಿ ದುಷ್ಕರ್ಮಿಗಳ ಗುಂಪೊಂದು ಶಾಲಾ ಮಕ್ಕಳಿರುವುದನ್ನೂ ಲೆಕ್ಕಿಸದೆ ಶಾಲಾ ಬಸ್ ಮೇಲೆ ಕಲ್ಲು, ಇಟ್ಟಿಗೆಗಳಿಂದ ದಾಳಿ ನಡೆಸಿದ್ದರು.

ಪದ್ಮಾವತ್ ಚಿತ್ರವನ್ನು ವಿರೋಧಿಸಿ ನಡೆದ ಘಟನೆ ಇದಾದರೂ ಪ್ರಧಾನಿ ನರೇಂದ್ರ ಮೋದಿಯವರ ಕಟ್ಟಾ ಅಭಿಮಾನಿ, ಲೇಖಕಿ ಮಧು ಕಿಶ್ವರ್ ಈ ಘಟನೆಗೆ ಮಸಾಲೆಗಳನ್ನು ಸೇರಿಸಿ ಇದು 'ಮುಸ್ಲಿಮರ ಕೃತ್ಯ' ಎಂದು ಟ್ವೀಟ್ ಮಾಡಿದ್ದರು. ಈ ಹಿಂದೆಯೂ ಹಲವು ಬಾರಿ ಸಮಾಜದ ಸ್ವಾಸ್ಥ್ಯ ಹದಗೆಡುವ, ಕೋಮು ಪ್ರಚೋದಕ ಟ್ವೀಟ್  ಮಾಡಿದ್ದ ಕಿಶ್ವರ್ ಈ ಬಾರಿ, “ಭನ್ಸಾಲಿಯ ಚಿತ್ರದ ವಿರುದ್ಧ ಕರ್ಣಿ ಸೇನೆಯ ಪ್ರತಿಭಟನೆಯ ಹೆಸರಿನಲ್ಲಿ ಮಕ್ಕಳಿದ್ದ ಬಸ್ ಮೇಲೆ ಕಲ್ಲೆಸೆತ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾದವರ ಹೆಸರುಗಳು ಸದ್ದಾಂ, ಆಮಿರ್, ಫಿರೋಝ್, ನದೀಮ್ ಹಾಗು ಅಶ್ರಫ್” ಎಂದು ಬರೆದೇ ಬಿಟ್ಟರು. ಈ ಹಿಂದೆಯೂ ಇಂತಹ ತಲೆಬುಡವಿಲ್ಲದ, ಎಳ್ಳಷ್ಟೂ ಸತ್ಯಾಂಶವಿಲ್ಲದ ಸುದ್ದಿಗಳನ್ನು ಹರಡುವುದು ಈ 'ಅಭಿಮಾನಿ'ಗೆ ಅಭ್ಯಾಸವಾಗಿದ್ದರೂ ಇದರ ಪರಿಣಾಮ ಬೇರೆಯದೇ ರೀತಿಯಲ್ಲಿ ವ್ಯಕ್ತವಾಯಿತು.

ಇದನ್ನೇ ಸತ್ಯವೆಂದು ನಂಬಿದ ಹಲವರು ಸಾಮಾಜಿಕ ಜಾಲತಾಣದಲ್ಲಿ ಇದೇ ಸುದ್ದಿಯನ್ನು ಶೇರ್ ಮಾಡತೊಡಗಿದರು. “ಶಾಲಾ ಮಕ್ಕಳಿದ್ದ ಬಸ್ ಗೆ ಕಲ್ಲೆಸೆದದ್ದು ಮುಸ್ಲಿಮರು” ಎಂಬ ಸುಳ್ಳು ಸುದ್ದಿ ವ್ಯಾಪಕವಾಗಿ ಹರಿದಾಡತೊಡಗಿತು.

ಆದರೆ ಈ ಎಲ್ಲಾ ವದಂತಿಗಳಿಗೆ ಶುಕ್ರವಾರ ಗುರುಗ್ರಾಮದ ಪೊಲೀಸರು ತೆರೆ ಎಳೆದಿದ್ದಾರೆ. “ಹರ್ಯಾಣದ ಸಾರಿಗೆ ಬಸ್ ಮತ್ತು ಶಾಲಾ ಮಕ್ಕಳಿದ್ದ ಬಸ್ ಮೇಲೆ ನಡೆದ ದಾಳಿಗೆ ಸಂಬಂಧಿಸಿ ಯಾವೊಬ್ಬ ಮುಸ್ಲಿಮನನ್ನೂ ಬಂಧಿಸಿಲ್ಲ” ಎಂದು ಪೊಲೀಸರು ಸ್ಪಷ್ಟನೆ ನೀಡಿದರು.

ಈ ಪ್ರಕರಣದಲ್ಲಿ ಯಾವೊಬ್ಬ ಮುಸ್ಲಿಮನೂ ಪಾಲ್ಗೊಂಡಿಲ್ಲ. ಮುಸ್ಲಿಮ್ ಯುವಕರನ್ನು ಬಂಧಿಸಲಾಗಿಲ್ಲ ಎಂದು ಪೊಲೀಸರೇ ಸ್ಪಷ್ಟನೆ ನೀಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಧು ಕಿಶ್ವರ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿವೆ. ಕೋಮು ದ್ವೇಷವನ್ನು, ಹರಡುವ, ಕೋಮು ಪ್ರಚೋದನೆ ನೀಡುವ ಕಿಶ್ವರ್ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಎಂದು ಹಲವರು ಒತ್ತಾಯಿಸಿದ್ದರೆ, ಇನ್ನೂ ಕೆಲವರು ಮಧು ಕಿಶ್ವರ್ ಖಾತೆಯಿಂದ ವೆರಿಫೈಡ್ ಬ್ಲು ಟಿಕ್ ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News