ಭಾರತ ಸೆಮಿಗೆ: ಪಾಕ್ ಎದುರಾಳಿ

Update: 2018-01-26 18:13 GMT

ಕ್ರೈಸ್ಟ್‌ಚರ್ಚ್, ಜ.26: ಬಾಂಗ್ಲಾದೇಶ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 131 ರನ್‌ಗಳ ಅಂತರದಿಂದ ಜಯ ಸಾಧಿಸಿರುವ ಭಾರತ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

  ಶುಕ್ರವಾರ ಕ್ವೀನ್ಸ್‌ಟೌನ್ ಇವೆಂಟ್ಸ್ ಸೆಂಟರ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 265 ರನ್ ಗಳಿಸಿತು. ಗೆಲ್ಲಲು ಸ್ಪರ್ಧಾತ್ಮಕ ಸವಾಲು ಪಡೆದ ಬಾಂಗ್ಲಾದೇಶ ತಂಡ ಕಮಲೇಶ್ ನಾಗರ್‌ಕೋಟಿ(3-18) ದಾಳಿಗೆ ತತ್ತರಿಸಿ 42.1 ಓವರ್‌ಗಳಲ್ಲಿ 134 ರನ್‌ಗೆ ಆಲೌಟಾಯಿತು. ಪಿನಾಕ್ ಘೋಷ್(43) ಸರ್ವಾಧಿಕ ಸ್ಕೋರ್ ದಾಖಲಿಸಿದರು. ಭಾರತ ಜ.30, ಮಂಗಳವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಪಾಕ್ ತಂಡ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕವನ್ನು ಮಣಿಸಿತ್ತು.

ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.

ಟಾಸ್ ಜಯಿಸಿದ ಭಾರತದ ನಾಯಕ ಪೃಥ್ವಿ ಶಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಟೂರ್ನಿಯಲ್ಲಿ ಮೊದಲ ಬಾರಿ ಭಾರತದ ಅಗ್ರ ಕ್ರಮಾಂಕದ ಆಟಗಾರರು ಬೇಗನೆ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಉಪ ನಾಯಕ ಶುಭ್‌ಮನ್ ಗಿಲ್(86 ರನ್, 96 ಎಸೆತ) ಹಾಗೂ ವಿಕೆಟ್‌ಕೀಪರ್-ದಾಂಡಿಗ ಹಾರ್ವಿಕ್ ದೇಸಾಯಿ(34,48 ಎಸೆತ)4ನೇ ವಿಕೆಟ್‌ಗೆ 74 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ನಾಯಕ ಶಾ ಅಗ್ರ ಕ್ರಮಾಂಕದಲ್ಲಿ 40 ರನ್ ಗಳಿಸಿದರೆ ಆಲ್‌ರೌಂಡರ್ ಅಭಿಷೇಕ್ ಶರ್ಮ ಇನಿಂಗ್ಸ್ ಅಂತ್ಯದಲ್ಲಿ 49 ಎಸೆತಗಳಲ್ಲಿ 50 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News