×
Ad

ಉ.ಪ್ರದೇಶದಲ್ಲಿ ಮರುಕಳಿಸಿದ ಹಿಂಸಾಚಾರ: ಬಸ್ಸು, ಅಂಗಡಿಗಳಿಗೆ ಬೆಂಕಿ

Update: 2018-01-27 18:21 IST

ಲಕ್ನೊ, ಜ.27: ಗುರುವಾರ ದಿಲ್ಲಿಯಲ್ಲಿ ನಡೆದ ಘರ್ಷಣೆಯಲ್ಲಿ ಮೃತಪಟ್ಟ ಯುವಕನ ಅಂತ್ಯಕ್ರಿಯೆ ನಡೆದ ಬಳಿಕ ಉ.ಪ್ರದೇಶದಲ್ಲಿ ಹಿಂಸಾಚಾರ ಮರುಕಳಿಸಿದ್ದು ಕಸ್‌ಗಂಜ್ ಪಟ್ಟಣದಲ್ಲಿ ತಂಡವೊಂದು ದಾಂಧಲೆ ನಡೆಸಿದೆ.

 ಕಸ್‌ಗಂಜ್ ಪಟ್ಟಣದ ಪ್ರಧಾನ ಮಾರುಕಟ್ಟೆಯಲ್ಲಿ ದಾಂಧಲೆ ನಡೆಸಿದ ತಂಡ ಹಲವು ಅಂಗಡಿಗಳಿಗೆ ಬೆಂಕಿಹಚ್ಚಿದೆ. ಇನ್ನೊಂದು ತಂಡ ಮಾರುಕಟ್ಟೆಯ ಹೊರಭಾಗದಲ್ಲಿರುವ ಕೆಲವು ಅಂಗಡಿಗಳಿಗೆ ಹಾಗೂ ಬಸ್ಸುಗಳಿಗೆ ಬೆಂಕಿಹಚ್ಚಿದೆ.

   ಗಣರಾಜ್ಯೋತ್ಸವ ದಿನಾಚರಣೆಯಂದು ದಿಲ್ಲಿಯಲ್ಲಿ ಎಬಿವಿಪಿ ಹಾಗೂ ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಆಯೋಜಿಸಿದ್ದ ‘ತಿರಂಗ ಬೈಕ್ ರ್ಯಾಲಿ’ ಸಂದರ್ಭ ನಡೆದ ಘರ್ಷಣೆಯಲ್ಲಿ ಉ.ಪ್ರದೇಶದ ಚಂದನ್‌ಗುಪ್ತ (22 ವರ್ಷ) ಎಂಬ ಯುವಕ ಮೃತಪಟ್ಟಿದ್ದು ನೌಷಾದ್ ಎಂಬಾತ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರ ದೇಹದಲ್ಲೂ ಬುಲೆಟ್‌ನಿಂದಾದ ಗಾಯಗಳಿತ್ತು ಎಂದು ಹೇಳಲಾಗಿದೆ. ಮೃತಪಟ್ಟ ಯುವಕನ ಅಂತ್ಯಸಂಸ್ಕಾರ ಹುಟ್ಟೂರಿನಲ್ಲಿ ಶನಿವಾರ ನೆರವೇರಿದ ಬಳಿಕ ಹಿಂಸಾಚಾರ ನಡೆದಿದೆ.

 ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಆದಿತ್ಯನಾಥ್, ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಶುಕ್ರವಾರದ ಘರ್ಷಣೆಗೆ ಸಂಬಂಧಿಸಿದಂತೆ ಪೊಲೀಸರು 49 ಮಂದಿಯನ್ನು ಬಂಧಿಸಿದ್ದು ಇತರ ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ . ಪ್ರಕರಣದ ತನಿಖೆಗೆ ತಂಡವೊಂದನ್ನು ರಚಿಸಲಾಗಿದೆ ಎಂದು ಕಸ್‌ಗಂಜ್ ಪೊಲೀಸರು ತಿಳಿಸಿದ್ದಾರೆ.

 ಶುಕ್ರವಾರ ನಡೆದ ತಿರಂಗ ಬೈಕ್ ರ್ಯಾಲಿಯ ವೀಡಿಯೊ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ನೂರಾರು ಯುವಕರು ರಾಷ್ಟ್ರಧ್ವಜ ಹಾಗೂ ಕೇಸರಿಧ್ವಜ ಹಿಡಿದುಕೊಂಡು ಪಟ್ಟಣದ ರಸ್ತೆಯೊಂದರಲ್ಲಿ ಸಾಗುತ್ತಿದ್ದಾಗ, ಇನ್ನೊಂದು ಸಮುದಾಯದ ವ್ಯಕ್ತಿಗಳು ಆ ದಾರಿಯಲ್ಲಿ ಸಾಗದಂತೆ ಸೂಚಿಸಿ ಮತ್ತೊಂದು ರಸ್ತೆಯಲ್ಲಿ ಸಾಗುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಮಾತಿನ ಚಕಮಕಿ ನಡೆದಿದ್ದು , ಭಾರತದಲ್ಲಿ ವಾಸಿಸಲು ಬಯಸುವವರು ವಂದೇಮಾತರಂ ಹೇಳಬೇಕು ಎಂದು ಕೆಲವರು ಘೋಷಣೆ ಕೂಗುತ್ತಿರುವುದು ವೀಡಿಯೊದಲ್ಲಿ ಕೇಳಿಬಂದಿದೆ. ಬಳಿಕ ಹಿಂಸಾಚಾರ ಆರಂಭಗೊಂಡಿದ್ದು ಕೆಲವರು ಕಲ್ಲುತೂರಾಟ ನಡೆಸಿದ್ದಾರೆ. ಬೈಕ್‌ಗಳಿಗೆ ಬೆಂಕಿಹಚ್ಚಲಾಗಿದ್ದು ರಸ್ತೆಯಲ್ಲಿ ಹಾದುಹೋಗುವ ವಾಹನಗಳಿಗೂ ಕಲ್ಲು ತೂರಲಾಗಿದೆ. ಪ್ರಾರ್ಥನಾ ಮಂದಿರವೊಂದಕ್ಕೆ ಬೆಂಕಿ ಹಚ್ಚಲಾಗಿದ್ದು ಗುಂಡು ಹಾರಾಟವೂ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News