ಹೂ ಈಸ್ ದ್ಯಾಟ್ ಬಂಗಾರಪ್ಪ

Update: 2018-01-27 13:11 GMT

ಆಗಲೇ (1980ರ ಚುನಾವಣೆಗೆ ಮೊದಲು) ಬಂಗಾರಪ್ಪ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸ್ಥಾನಕ್ಕೆ ಪರಿಚಯಿಸಿದ್ದು ನಾನು, ಕಾಂಗ್ರೆಸ್ ಗೆ ಬರುವುದಕ್ಕಿಂತ ಮೊದಲು ಅವರು ಸೋಶಲಿಸ್ಟ್ ಪಾರ್ಟಿಯಲ್ಲಿದ್ದರು. ಅವರನ್ನು ಕಾಂಗ್ರೆಸ್ಸಿಗೆ ಕರೆತಂದು ಮಂತ್ರಿ ಮಾಡಿದ್ದು ದೇವರಾಜ ಅರಸು. 1978ರಲ್ಲಿ ಅರಸು ಬಂಡಾಯವೆದ್ದ ಸಮಯದಲ್ಲಿ ಇಂದಿರಾ ಗಾಂಧಿ ಬೆಂಗಳೂರಿಗೆ ಬಂದಿದ್ದಾಗ- ‘ಪೂಜಾರಿಜೀ ನಿಮ್ಮನ್ನು ನಾನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುತ್ತೇನೆ’ ಎಂದು ಹೇಳಿದ್ದರು. ‘ನನಗೆ ಬೇಡಮ್ಮ. ಕ್ಷಮಿಸಿ’ ಎಂದು ಹೇಳಿದ್ದೆ. ‘ಅದರ ನಂತರ ನಿಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಿದ್ದೇನೆ ಪೂಜಾರಿಜೀ’ ಎಂದು ಅವರು ಒತ್ತಾಯಪೂರ್ವಕವಾಗಿ ಹೇಳಿದ್ದರು. ‘ಬೇಡ ನನಗೆ ಹಣ ಕಲೆಕ್ಷನ್ ಮಾಡುವುದು ಗೊತ್ತಿಲ್ಲ, ಈ ಸ್ಥಾನವೂ ಬೇಡ’ ಎಂದೆ. ‘ಹಾಗಾದರೆ ಕೆಪಿಸಿಸಿಗೆ ಮತ್ತೆ ಯಾರನ್ನಾದರೂ ಶಿಫಾರಸು ಮಾಡಿ’ ಎಂದರು.

ಅದಾದ ನಂತರ ನಾನು ದೆಹಲಿಗೆ ಹೋದಾಗ (ಬೇರೆ ಕೋಣೆಗೆ ಹೋಗು ಎಂದ ಸಂದರ್ಭ) ಅಲ್ಲಿ ಇಂದಿರಾ ಗಾಂಧಿ- ‘ಕೆಪಿಸಿಸಿ ಅಧ್ಯಕ್ಷರು ಯಾರಾಗಬಹುದು’ ಎಂದು ಕೇಳಿದರು. ‘ಬಂಗಾರಪ್ಪ ಆಗಬಹುದು’ ಎಂದೆ. ‘ಹೂ ಈಸ್ ದ್ಯಾಟ್ ಬಂಗಾರಪ್ಪ? ಐ ಹ್ಯಾವ್ ನಾಟ್ ಸೀನ್ ಹಿಮ್’ (ಯಾರು ಅದು ಬಂಗಾರಪ್ಪ, ನಾನು ನೋಡಿಲ್ಲವಲ್ಲ) ಎಂದರು.  ‘ಹಿ ಇಸ್ ಇನ್ ದ ಕ್ಯಾಬಿನೆಟ್ ಆಫ್ ದೇವರಾಜ ಅರಸು. ಯು ಮೇ ಹ್ಯಾವ್ ಸೀನ್ ಹಿಮ್’ (ದೇವರಾಜ ಅರಸರ ಕ್ಯಾಬಿನೆಟ್ ನಲ್ಲಿದ್ದಾರೆ. ನೀವು ನೋಡಿರಬಹುದು) ಅಂತ ಹೇಳಿದೆ. ‘ಬ್ರಿಂಗ್ ಹಿಮ್’ (ಅವರನ್ನು ಕರೆದುಕೊಂಡು ಬನ್ನಿ) ಅಂತ ಹೇಳಿದ್ದರು.

ಕೇಂದ್ರದಲ್ಲಿ ಆಗ ಜನತಾ ಪಕ್ಷದ ಸರ್ಕಾರ ಇದ್ದುದರಿಂದ ಮನೆಯ ಸುತ್ತೆಲ್ಲ ಗೂಢಚಾರರು ಇದ್ದರು. ಯಾರು ಹೋದರೂ ರಿಪೋರ್ಟ್ ಆಗುತ್ತಿತ್ತು. ಅದಕ್ಕೆ ಇಂದಿರಾ ಗಾಂಧಿ ರಾತ್ರಿ ವೇಳೆ ನನ್ನನ್ನು ಕರೆದಿದ್ದರು. ರಾತ್ರಿ ಕೂಡ ಗೂಢಚಾರರು ತಪ್ಪಿದ್ದಿಲ್ಲ. ನಾನು ಅವರ ಮನೆಗೆ ಹೋಗುತ್ತಿದ್ದುದು ಬೇಲಿ ದಾಟಿ. ಸರಿ, ಬಂಗಾರಪ್ಪ ಅವರನ್ನು ದೆಹಲಿಗೆ ಕರೆದೊಯ್ದು ಒಂದು ಹೊಟೇಲ್ ನಲ್ಲಿ ಕುಳ್ಳಿರಿಸಿದೆ. ಅರಸರಿಗೆ ಕೂಡ ಇವರು ದೆಹಲಿಗೆ ಹೋದದ್ದು ಗೊತ್ತಾಗಬಾರದಲ್ಲ? ಬಂಗಾರಪ್ಪರನ್ನು ಕೂಡ ಇದೇ ಬೇಲಿ ದಾಟಿಸಿಯೇ ಇಂದಿರಾ ಗಾಂಧಿ ಮನೆಗೆ ಕರೆದೊಯ್ದದ್ದು. ಇಂದಿರಾ ಗಾಂಧಿಗೆ ಇವರ ಪರಿಚಯ ಮಾಡಿಸಿದೆ. ಬಂಗಾರಪ್ಪರನ್ನು ಮೇಲಿನಿಂದ ಕೆಳಗಿನವರೆಗೆ ನೋಡಿದರು. ‘ಆಯ್ತು, ಯು ಕ್ಯಾನ್ ಗೋ’ ಎಂದು ಬಂಗಾರಪ್ಪನವರಿಗೆ ಹೇಳಿದರು. ಎರಡೇ ಎರಡು ಸೆಕೆಂಡ್ ಗಳು. ನಂತರ ನನ್ನ ಬಳಿ ಕೇಳಿದರು: ‘ಪೂಜಾರಿಜೀ ಕ್ಯಾನ್ ವಿ ಟ್ರಸ್ಟ್ ಹಿಮ್?’ (ಪೂಜಾರಿಯವರೇ, ಇವರನ್ನು ನಂಬಬಹುದಾ?’) ‘ನಂಬಬಹುದು’ ಎಂದೆ.

ಬಂಗಾರಪ್ಪ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದದ್ದು ಹೀಗೆ.

ಈ ಚುನಾವಣೆಗಿಂತ ಸ್ವಲ್ಪ ಸಮಯದ ಹಿಂದೆ ಇಂದಿರಾ ಗಾಂಧಿಯವರು ಗುಂಡೂರಾಯರನ್ನು ರಾಜ್ಯಕ್ಕೆ ಎಲೆಕ್ಷನ್ ಕಮಿಟಿ ಚೇರ್ ಮೆನ್ ಆಗಿ ನೇಮಿಸಿ ಪ್ರಕಟಣೆ ಮಾಡಿದ್ದರು. ಅಷ್ಟರವರೆಗೆ ಬಂಗಾರಪ್ಪಗೆ ಮುಖ್ಯಮಂತ್ರಿಯಾಗುವ ಕನಸಿತ್ತು. ಈಗ ಗುಂಡೂರಾಯರನ್ನು ನೇಮಕ ಮಾಡಿದ್ದು ಅವರಿಗೆ ಶಾಕ್ ಹೊಡೆದಂತಾಯಿತು. ‘ಇನ್ನು ನನಗೆ ಸಿಎಂ ಆಗುವ ಅವಕಾಶ ಸಿಗುವುದಿಲ್ಲ’ ಎನ್ನುವುದು ಅವರ ತಲೆಗೆ ಬಂತು. ಆದರೆ ಮುಖ್ಯಮಂತ್ರಿ ಯಾರು ಎನ್ನುವುದನ್ನು ಇನ್ನೂ ನಿರ್ಧಾರ ಮಾಡಿರಲಿಲ್ಲ. ಬಂಗಾರಪ್ಪ ಕೂಡ ಕಮಿಟಿಯಲ್ಲಿ ಇರುತ್ತಾರೆ. ಆದರೆ ಇವರು ಯೋಚಿಸಿದ್ದು ಹೇಗೆಂದರೆ ನಾಡಿದ್ದು ಸಿಎಂ ಆಗುವಾಗ ಗುಂಡೂರಾಯರನ್ನೇ ಮಾಡುತ್ತಾರೆ ಎಂದು ಅದಕ್ಕೆ ಕೆಂಡಾಮಂಡಲರಾದರು. ನನ್ನ ಬಳಿ ಬಂದು ಇದನ್ನೇ ಹೇಳಿದರು. ಕೆಟ್ಟ ಮಾತುಗಳಲ್ಲಿ ಇಂದಿರಾಗಾಂಧಿಯವರನ್ನು ಹೀಯಾಳಿಸಿದರು. ನಂತರ ನನ್ನ ದೆಹಲಿಯ ನನ್ನ ಬಂದು ‘ಪಾರ್ಟಿ ಬಿಡುತ್ತೇನೆ’ ಎಂದರು. ‘ಎಲೆಕ್ಷನ್ ಆಗಿಲ್ಲವಲ್ಲ, ಈಗಲೇ ತಲೆಬಿಸಿ ಏಕೆ’ ಎಂದೆ. ‘ಇಂದಿರಾ ಗಾಂಧಿ ಬಳಿ ಕರೆದೊಯ್ಯುತ್ತೇನೆ’ ಎಂದೆ. ‘ಬರುವುದಿಲ್ಲ’ ಎಂದು ಪಟ್ಟು ಹಿಡಿದರು. ಆದರೂ ಕರೆದುಕೊಂಡು ಹೋದೆ. ಹೋದ ಕೂಡಲೇ ಇವರು ಆರ್ಭಟ ಮಾಡಿದ್ದು ನೋಡಿ ನನಗೆ ಬಹಳ ಬೇಸರವಾಯಿತು. ಅಲ್ಲಿಗೆ ಹೋದಾಗ ಇಂದಿರಾ ಗಾಂಧಿಯವರಿಗೆ ಹೊಡೆಯಲು ಹೋದರು. ನನಗೆ ಆಘಾತವಾಯಿತು. ಹಾರಿ ಹೋಗಿ ಅವರನ್ನು ಹಿಡಿದು ಹಿಂದಕ್ಕೆ ಎಳೆದೆ. ಇಂದಿರಾ ಗಾಂಧಿ ಹೆದರಿ ನಡುಗುತ್ತಿದ್ದರು. ‘ಏನಾಗಿದೆ ನಿಮಗೆ? ತಲೆ ಸರಿ ಉಂಟಲ್ಲ? ಹೋಗಿ ಇಲ್ಲಿಂದ, ಹೊರಗೆ ನಿಲ್ಲಿ’ ಎಂದು ಹೇಳಿದೆ. ಹೊರಗೆ ಕರೆತಂದು ನಿಲ್ಲಿಸಿದೆ. ನಂತರ ಒಳಗೆ ನಾನು ಹೋದೆ. ಇಂದಿರಾ ಗಾಂಧಿ ‘ನನ್ನ ಮಕ್ಕಳು ಕೂಡ ಈ ರೀತಿ ಮಾಡಲಿಲ್ಲ. ಈ ರೀತಿ ಮಾಡಬಾರದಿತ್ತು’ ಎಂದು ನೊಂದುಕೊಂಡರು. ‘ಇದನ್ನೆಲ್ಲ ಸರಿ ಮಾಡ್ತೇನೆ’ ಎಂದು ಹೇಳಿ ಹೊರಗೆ ಬಂದೆ. ಬಂಗಾರಪ್ಪ ಹೊರಗೆ ನಿಂತಿದ್ದರು. ‘ಮಕ್ಕಳು ಕೂಡ, ಕ್ರಿಮಿನಲ್ ಗಳು ಕೂಡ, ಹೀಗೆ ಮಾಡಲಿಕ್ಕಿಲ್ಲ. ದೇಶದ ಪ್ರಧಾನಿ ಆಗಿದ್ದವರು ಅವರು, ಅಧಿಕಾರವೆಂದರೆ ನಿಮಗೆ ಅಷ್ಟು ಮೋಹವೇ? ಅದಿಲ್ಲದಿದ್ದರೆ ಬದುಕಲು ಸಾಧ್ಯವೇ ಇಲ್ಲವೇ” ಎಂದು ತರಾಟೆಗೆ ತೆಗೆದುಕೊಂಡೆ.

ನಂತರ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಬಂಗಾರಪ್ಪ ಮೌನ. ಇದೇ ಶ್ರೀನಿವಾಸ ಪ್ರಸಾದ್, ಉತ್ತರ ಕನ್ನಡದ ದೇವರಾಯ ನಾಯಕ್ ಅವರು ಬಂಗಾರಪ್ಪ ಅವರ ಅಭ್ಯರ್ಥಿಗಳು. ಅವರಿಬ್ಬರಿಗೂ ಇಂದಿರಾ ಗಾಂಧಿಗೆ ಹೇಳಿ ಟಿಕೆಟ್ ಕೊಡಿಸಿದ್ದೆ. ಆದರೂ ಬಂಗಾರಪ್ಪ ಪ್ರಚಾರಕ್ಕೆ ಎಲ್ಲೂ ಹೋಗಲಿಲ್ಲ. ನಾನು ಅವರಿಗೆ ಕರೆ ಮಾಡಿ ‘ಏನಾಗಿದೆ ನಿಮಗೆ, ಇದೇನು ಎಸೆಂಬ್ಲಿ ಚುನಾವಣೆಯಾ ಇದು? ಪ್ರಚಾರಕ್ಕೆ ಹೊರಡಬೇಕು ನೀವು”ಎಂದೆ. ಕೊನೆಗೆ ಇಂದಿರಾ ಗಾಂಧಿ ಬೆಂಗಳೂರಿಗೆ ಬರುವವರಿದ್ದರು. ‘ಅಲ್ಲಿಗೂ ನಾನು ಹೋಗುವುದಿಲ್ಲ’ ಎಂದು ಬಂಗಾರಪ್ಪ ಪಟ್ಟು ಹಿಡಿದರು. ನಾನು ಎಚ್ಚರಿಕೆ ನೀಡಿ ಬಳಿಕ ಬಹಳ ಕಷ್ಟದಲ್ಲಿ ಕರೆದುಕೊಂಡು ಹೋದೆ. ಎಲ್ಲ ಕಡೆ ಇಂದಿರಾ ಗಾಂಧಿ ಬರುವಾಗ ಭಾರಿ ಜನ ಬೆಂಬಲ. ಆ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ 354 ಸ್ಥಾನ ಗಳಿಸಿ ಅಧಿಕಾರಕ್ಕೇರಿತು. ನಾನೂ ಗೆದ್ದೆ.

ಬಿ.ಜನಾರ್ದನ ಪೂಜಾರಿಯವರ ಆತ್ಮಕಥೆ ‘ಸಾಲಮೇಳದ ಸಂಗ್ರಾಮ’ದ ಆಯ್ದ ಭಾಗಗಳು

ಪ್ರಕಾಶಕರು: ಸಂತೋಷ್ ಕುಮಾರ್ ಪೂಜಾರಿ ಮತ್ತು ದೀಪಕ್ ಪೂಜಾರಿ, ಚೆನ್ನಮ್ಮ ಕುಟೀರ, ಬಂಟ್ವಾಳ ಮೂಡ ಗ್ರಾಮ, ಬಿ.ಸಿ.ರೋಡ್ ಅಂಚೆ, ಜೋಡುಮಾರ್ಗ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಕರ್ನಾಟಕ, ಪಿನ್: 574219

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News