ವೋಝ್ನಿಯಾಕಿಗೆ ಮೊದಲ ಗ್ರಾಂಡ್ ಸ್ಲಾಮ್
ಮೆಲ್ಬೋರ್ನ್, ಜ.27: ಡೆನ್ಮಾರ್ಕ್‌ನ ಕರೋಲಿನಾ ವೋಝ್ನಿಯಾಕಿ ಅವರು ಆಸ್ಟ್ರೇಲಿಯನ್ ಓಪನ್ ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಎತ್ತುವ ಮೂಲಕ ಮೊದಲ ಬಾರಿ ಗ್ರಾಂಡ್ ಸ್ಲಾಮ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಇಂದು ನಡೆದ ಫೈನಲ್‌ನಲ್ಲಿ ವೋಝ್ನಿಯಾಕಿ ಅವರು ರೊಮೇನಿಯಾದ ಸಿಮೊನಾ ಹಾಲೆಪ್ ಅವರನ್ನು 7-6(7/2),3-6,6-4 ಅಂತರದಲ್ಲಿ ಮಣಿಸಿ ಪ್ರಶಸ್ತಿಯನ್ನು ಬಾಚಿಕೊಂಡರು.
ವೋಝ್ನಿಯಾಕಿ ಅವರು ನಡೆಸಿದ 43ನೇ ಪ್ರಯತ್ನದಲ್ಲಿ ಗ್ರಾಂಡ್ ಸ್ಲಾಮ್ ಟ್ರೋಫಿಯನ್ನು ಎತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ವೋಝ್ನಿಯಾಕಿ ಮತ್ತು ಹಾಲೆಪ್ ಅವರು ಈ ಹಿಂದೆ ಎರಡು ಗ್ರಾಂಡ್ ಸ್ಲಾಮ್ ಫೈನಲ್‌ನಲ್ಲಿ ಪ್ರಶಸ್ತಿ ಎತ್ತುವಲ್ಲಿ ಎಡವಿದ್ದರು. ಮೂರನೇ ಬಾರಿ ಇಬ್ಬರು ಆಟಗಾರ್ತಿಯರು ಫೈನಲ್ ಪ್ರವೇಶಿಸಿದ್ದರು. ಈ ಪೈಕಿ ವೋಝ್ನಿಯಾಕಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ. ಆದರೆ ಹಾಲೆಪ್ ಅವರು ಮತ್ತೊಮ್ಮೆ ಪ್ರಶಸ್ತಿಯ ಸುತ್ತಿನಲ್ಲಿ ಮುಗ್ಗರಿಸಿದ್ದಾರೆ.
ವೋಝ್ನಿಯಾಕಿ ಅವರು 2009ರಲ್ಲಿ ಮತ್ತು 2014ರಲ್ಲಿ ಯುಎಸ್ ಓಪನ್ ಫೈನಲ್ ತಲುಪಿದ್ದರು. 2010ರಲ್ಲಿ ಮಹಿಳೆಯರ ಟೆನಿಸ್ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದ್ದರೂ, ಅವರಿಗೆ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿರಲಿಲ್ಲ.