ತುಂಬೆ: ಕಾಲು ಜಾರಿ ನದಿಗೆ ಬಿದ್ದು ಯುವಕರಿಬ್ಬರು ಮೃತ್ಯು

Update: 2018-01-28 13:31 GMT

ಬಂಟ್ವಾಳ, ಜ. 28: ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಲ್ಲಿನ ತುಂಬೆಯ ನೇತ್ರಾವತಿ ನದಿಯಲ್ಲಿ ರವಿವಾರ ನಡೆದಿದೆ.

ಮೃತರನ್ನು ಫರಂಗಿಪೇಟೆ ಸಮೀಪದ ಮಾರಿಪಳ್ಳ ನಿವಾಸಿಗಳಾದ ಸುಲೈಮಾನ್ ಎಂಬವರ ಪುತ್ರ ಸವಾದ್ (19) ಹಾಗೂ ಇಬ್ರಾಹೀಂ ಎಂಬವರ ಪುತ್ರ ರಮ್ಲಾನ್ (20) ಎಂದು ಗುರುತಿಸಲಾಗಿದೆ.

ಘಟನೆಯ ವಿವರ

ಫರಂಗಿಪೇಟೆ ಸಮೀಪದ ಮಾರಿಪಳ್ಳ ನಿವಾಸಿಗಳಾದ ಸವಾದ್ ಹಾಗೂ ರಮ್ಲಾನ್ ಅವರು ಮಾರಿಪಳ್ಳದಿಂದ ಕಾರ್ಯಕ್ರಮದ ನಿಮಿತ್ತ ಸಜೀಪನಡುವಿನಲ್ಲಿ ರುವ ತನ್ನ ಸ್ನೇಹಿತರೊಬ್ಬರ ಮನೆಗೆ ತೆರಳಿದ್ದರು. ಮಾರಿಪಳ್ಳದಿಂದ ತುಂಬೆಯ ಒಳಮಾರ್ಗವಾಗಿ ನಡೆದು ಬಂದು ನೇತ್ರಾವತಿಯ ನದಿಯ ಮೂಲಕ ದಾಟಲು ಮುಂದಾಗಿದ್ದಾರೆ. ಈ ವೇಳೆ ರಮ್ಲಾನ್ ಬಂಡೆ ಕಲ್ಲಿನ ಮೇಲೆ ನಡೆದುಕೊಂಡು ಹೋಗುವಾಗ ಜಾರಿ ನೀರಿಗೆ ಬಿದ್ದಿದ್ದಾರೆ. ನೀರಿನ ಆಳಕ್ಕೆ ಸಿಲುಕಿದ ರಮ್ಲಾನ್‌  ಮುಳುಗುವುದನ್ನು ಕಂಡ ಸವಾದ್, ತನ್ನ ಸ್ನೇಹಿತನನ್ನು ರಕ್ಷಿಸಲು ಮುಂದಾಗಿದ್ದು, ಈ ವೇಳೆ ಇಬ್ಬರೂ ಕೂಡಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಂಟ್ವಾಳ ಗ್ರಾಮಾಂತರ ಠಾಣಾ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮಾಹಿತಿ ಕಲೆಹಾಕಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಷೋಷಕರು ನೀಡಿದ ದೂರಿನಡಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತದೇಹ ಪತ್ತೆ: ಘಟನೆಯ ಬಗ್ಗೆ ಮಾಹಿತಿ ಅರಿತ ಇಲ್ಲಿನ ಸ್ಥಳೀಯ ಈಜುಗಾರರಾದ ಫ್ರಾನ್ಸಿ, ಜಯಕರ, ಮೋಹನ್‌ದಾಸ್ ಹಾಗೂ ತುಂಬೆ, ಸಜೀಪದ ಸ್ಥಳೀಯ ಈಜುಗಾರರು ಮೃತದೇಹ ಪತ್ತೆಗಾಗಿ ನಾಡದೋಣಿಯ ಮೂಲಕ ಹುಡುಕಾಟ ನಡೆಸಿದ್ದಾರೆ. ಈ ವೇಳೆ ರಮ್ಲಾನ್ ಮೃತದೇಹವು ಬಂಡೆ ಕಲ್ಲಿನ ಬದಿಯಲ್ಲಿ ಪತ್ತೆಯಾಗಿದ್ದು, ಸವಾದ್ ಮೃತದೇಹ ಕೆಲ ಸಮಯದ ನಂತರ ಇನ್ನೊಂದು ಕಡೆಯಲ್ಲಿ ಪತ್ತೆಯಾಗಿದೆ. ಇಬ್ಬರ ಮೃತದೇಹಗಳನ್ನು ಮೇಲಕ್ಕೆತ್ತುವಲ್ಲಿ ಇಲ್ಲಿನ ಮುಳುಗು ತಜ್ಞರ ತಂಡ ಯಶಸ್ವಿಯಾಗಿದೆ. ಮೃತದೇಹಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆಯ ನಂತರ ಕುಟುಂಸ್ಥರಿಗೆ ಹಸ್ತಾಂತರ ಮಾಡಲಾಗಿದೆ.

ಸ್ಮಶಾನ ಮೌನದಲ್ಲಿ ಮಾರಿಪಳ್ಳ

ಯುವಕರಿಬ್ಬರ ಸಾವಿನಿಂದ ಮಾರಿಪಳ್ಳದಲ್ಲಿ ಇದೀಗ ಸ್ಮಶಾನ ಮೌನ ಆವರಿಸಿದೆ. ಮಾರಿಪಳ್ಳ ನಿವಾಸಿಗಳಾದ ಸವಾದ್ ಹಾಗೂ ರಮ್ಲಾನ್ ಮನೆಗಳು ಅಕ್ಕಪಕ್ಕದಲ್ಲಿವೆ. ಈ ಎರಡೂ ಮನೆಗಳಲ್ಲೂ ರೋಧನ ಮುಗಿಲು ಮುಟ್ಟಿದೆ.

ಎರಡೂ ಬಡಕುಟುಂಬಗಳು

ನೀರಿನಲ್ಲಿ ಮುಳುಗಿ ಮೃತಪಟ್ಟ ಇಬ್ಬರ ಕುಟುಂಬಗಳು ಬಡ ವರ್ಗದ ಕುಟುಂಬಗಳು. ಇದರಲ್ಲಿ ಮಾರಿಪಳ್ಳದ ನಿವಾಸಿ ಸುಲೈಮಾನ್ ಅವರ ಐವರು ಮಕ್ಕಳಲ್ಲಿ ಸವಾದ್ ಹಿರಿಯ ಪುತ್ರ. ಸುಲೈಮಾನ್ ಅವರು ಅಂಗವಿಕಲರಾಗಿದ್ದು, ಫರಂಗಿಪೇಟೆಯ ಆಟೊ ರಿಕ್ಷಾವೊಂದರಲ್ಲಿ ದುಡಿಯುತ್ತಿದ್ದಾರೆ. ಇವರ ಮಕ್ಕಳಲ್ಲಿ ಸವಾದ್ ಹಿರಿಯ ಮಗನಾಗಿದ್ದು, ಕುಟುಂಬದ ಆಧಾರ ಸ್ತಂಭನಾಗಿದ್ದ. ವೃತ್ತಿಯಲ್ಲಿ ಫರಂಗಿಪೇಟೆಯ ಅಂಗಡಿಯೊಂದರಲ್ಲಿ ಮೆಕಾನಿಕ್ ಆಗಿ ಸವಾದ್ ಕೆಲಸ ಮಾಡುತ್ತಿದ್ದು, ಕುಟುಂಬವನ್ನು ನಡೆಸುತ್ತಿದ್ದ. ಉಳಿದ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಅದೇ ರೀತಿ ಮಾರಿಪಳ್ಳ ನಿವಾಸಿ ಇಬ್ರಾಹಿಂ ಅವರ ನಾಲ್ಕು ಮಕ್ಕಳಲ್ಲಿ ರಮ್ಲಾನ್ ಮೂರನೇಯವನು. ಹಿರಿಯ ಮಗ ಕೂಲಿ ಕೆಲಸ ಮಾಡುತ್ತಿದ್ದು, ಇಬ್ರಾಹಿಂ ಅವರು ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದಾರೆ. ಕಡು ಬಡತನದಿಂದ ಶಾಲೆ ಬಿಟ್ಟ ರಮ್ಲಾನ್ ಮನೆಯಲ್ಲಿಯೇ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಎಚ್ಚರಿಕೆ ಅಗತ್ಯ: ತುಂಬೆಯ ನೇತ್ರಾವತಿ ತೀರದಲ್ಲಿ ಈ ಮೊದಲು ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದರಿಂದ ಅಲ್ಲಲ್ಲಿ ಕೃತಕ ಹೊಂಡ ಉಂಟಾಗಿದೆ. ಈ ಕೃತಕ ಹೊಂಡಕ್ಕೆ ಯುವಕರು ಜಾರಿಬಿದ್ದಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ತುಂಬೆಯ ಒಳಮಾರ್ಗದ ಮೂಲಕ ಕಾಲ್ನಡಿಯಲ್ಲಿ ಸಜೀಪನಡುವಿಗೆ ಹೋಗಬಹುದಾಗಿದೆ. ಈ ಪ್ರದೇಶದ ಜನರು ಸಜೀಪನಡುವಿಗೆ ಹೋಗಲು ಇದೇ ದಾರಿಯನ್ನು ಬಳಸುತ್ತಿದ್ದಾರೆ. ನೀರಿನ ಪ್ರಮಾಣವನ್ನು ನೋಡಿ ನದಿಯನ್ನು ದಾಟುತ್ತಿದ್ದರು. ಅಲ್ಲದೆ ರಜಾದಿನಗಳಲ್ಲಿ ಆಟವಾಡಲು, ಈಜಾಡಲು ಹಾಗೂ ಚಿಪ್ಪಿ ಮೀನು ಹಿಡಿಯಲು ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ನದಿಯ ಬದಿಯಲ್ಲಿ ಕೃತಕ ಹೊಂಡಗಳಾಗಿ ನೀರು ನಿಂತಿದ್ದು, ಈ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ವಹಿಸುವ ಅಗತ್ಯವೂ ಇದೆ.

ಸಂತಾಪ: ಆಹಾರ ಸಚಿವ ಯು.ಟಿ. ಖಾದರ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಶಾಹುಲ್ ಎಸ್.ಎಚ್., ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ತುಂಬೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್, ಪುದು ಗ್ರಾಪಂ ಉಪಾಧ್ಯಕ್ಷ ಹಾಶಿರ್ ಪೇರಿನತಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಇಕ್ಬಾಲ್ ದರ್ಬಾರ್, ಪುದು ಗ್ರಾಪಂ ಸದಸ್ಯ ರಮ್ಲಾನ್, ಸುಲೈಮಾನ್ ಉಸ್ತಾದ್, ಮಾಜಿ ಸದಸ್ಯ ಇಕ್ಬಾಲ್ ಅಮೆಮಾರ್, ಸಲೀಂ ಕುಂಪನಮಜಲ್ ಮನೆಗೆ ಭೇಟಿ ನೀಡಿ, ಸಂತಾಪ ಸೂಚಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News